ಕೋಲಾರ: ಸರ್ಕಾರಿ ಕೆಲಸ ಮಾಡೋ ಅಧಿಕಾರಿಗಳ ಜೀವಕ್ಕೆ ಎಷ್ಟು ಮಾತ್ರ ಭದ್ರತೆಯಿದೆ ಎಂಬ ಪ್ರಶ್ನೆ ಈಗ ಕಾಡಲಾರಂಭಿಸಿದೆ. ಸರ್ವೇ ಕಾರ್ಯಕ್ಕೆ ತೆರಳಿದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೀಶ್ವರ ಮೇಲೆ ಪೊಲೀಸರು ಸಮ್ಮುಖದಲ್ಲೆ ಚಾಕು ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಣ್ಣೆದುರೆ ಇದ್ದ ಅಧಿಕಾರಿ ಕೊಲೆಯಾಗಿದ್ದಕ್ಕೆ ಅಧಿಕಾರಿ ವಲಯವೇ ಬೆಚ್ಚಿಬಿಚ್ಚಿದೆ.
ಚಂದ್ರಮೌಳೀಶ್ವರ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಆಗಿ ಕಳೆದ 3 ವರ್ಷದಿಂದ ಸೇವೆ ಸಲ್ಲಿಸ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಲವು ಸಭೆಗಳಲ್ಲಿ ಭಾಗಿಯಾಗಿದ್ದ ಚಂದ್ರಮೌಳೀಶ್ವರ, ಸಂಜೆಯೊಳಗೆ ಬಾರದ ಲೋಕಕ್ಕೆ ತೆರಳಿದ್ದಾರೆ.
ಘಟನೆ ನಡೆದಿದ್ದು ಹೇಗೆ..!
ಹೌದು, ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಪ್ಪ ಹಾಗು ಮತ್ತೊಬ್ಬರ ಮಧ್ಯೆ ಜಮೀನು ವಿವಾದವಿತ್ತು. ಈ ಪ್ರಕರಣ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗೆ ವೆಂಕಟಪ್ಪ ವಿರುದ್ಧವಾಗಿ ದೂರು ಸಲ್ಲಿಸಿದ್ದ ರಾಮಮೂರ್ತಿ ಪರವಾಗಿ ತೀರ್ಪು ಬಂದು ಪ್ರಕರಣ ಇತ್ಯರ್ಥವಾಗಿತ್ತು,
ಪ್ರಕರಣ ಇತ್ಯರ್ಥವಾದರು ಜಮೀನು ಬಿಡದ ವೆಂಕಟಪ್ಪ ವಿರುದ್ಧ ರಾಮಮೂರ್ತಿ ಕಾಮಸಮುದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ಯರ್ಥವಾದ ಜಾಗದಲ್ಲಿ ಗುರ್ತಿಗಾಗಿ ಕಲ್ಲು ನೆಡುತ್ತಿರುವಾಗ ಆರೋಪಿ ವೆಂಕಟಪ್ಪ ಅಡ್ಡಿಪಡಿಸಿದ್ದಕ್ಕೆ ತಹಶೀಲ್ದಾರ್ ಗೆ ರಾಮಮೂರ್ತಿ ದೂರು ನೀಡಿದ್ದರು.
ಗುರುವಾರ ಮಧ್ಯಾಹ್ನ 2.30ಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಚಂದ್ರಮೌಳೀಶ್ವರ್ ಪರಿಶೀಲನೆ ನಡೆಸಿ ನ್ಯಾಯಾಲಯ ಆದೇಶದಂತೆ ಜಮೀನು ಬಿಡಲು ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದ ನಿವೃತ್ತ ಶಿಕ್ಷಕ ವೆಂಕಟಪ್ಪ ಗಲಾಟೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಪೇದೆಗಳು ಹಾಗು ಸಬ್ ಇನ್ಸ್ ಪೆಕ್ಟರ್ ದಯಾನಂದ್ ಇದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಗಲಾಟೆ ಮಾಡುತ್ತಲೇ ಹತ್ತಿರಕ್ಕೆ ಬಂದ ವೆಂಕಟಪ್ಪ ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ತಹಶೀಲ್ದಾರ್ ಚಂದ್ರಮೌಳೀಶ್ವರ ಎದೆ ಭಾಗದ ಮದ್ಯಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ.
ಎದೆ ಭಾಗದ ಮಧ್ಯೆ ಚಾಕುವಿನಿಂದ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವದಿಂದ ತಹಶೀಲ್ದಾರ್ ಚಂದ್ರಮೌಳೀಶ್ವರ ಕುಸಿದು ಬಿದ್ದಿದ್ದಾರೆ. ತಹಶೀಲ್ದಾರ್ ಸರ್ಕಾರಿ ವಾಹನದಲ್ಲೆ ಬಂಗಾರಪೇಟೆ ಆಸ್ಪತ್ರೆಗೆ ಚಂದ್ರಮೌಳೀಶ್ವರ ಅವರನ್ನು ರವಾನಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಆರಂಭಿಸುವ ಮುನ್ನವೇ ತಹಶೀಲ್ದಾರ್ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಸಿ ಸತ್ಯಭಾಮ, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಮೊಹಮ್ಮದ್ ಸುಜೀತಾ ಸೇರಿದಂತೆ ಹಲವು ಅಧಿಕಾರಿಗಳು ಜಮಾಯಿಸಿದ್ದರು.
ಹಾಡಹಗಲೇ, ಪೊಲೀಸರ ಸಮ್ಮುಖದಲ್ಲೇ ಇಂತಹ ಕೃತ್ಯ ನಡೆದಿದೆ. ಇದಕ್ಕೆ ಯಾರು ಹೊಣೆ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ. ಅಧಿಕಾರಿಯ ಸಾವಿಗೆ ಆಕ್ರೊಶ ವ್ಯಕ್ತಪಡಿಸಿರುವ ಸರ್ಕಾರಿ ನೌಕರರ ಸಂಘ ಶುಕ್ರವಾರ ಕೆಲಸಕ್ಕೆ ಗೈರಾಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದಿದೆ. ಆದರೆ, ಆರೋಪಿಗೆ ಮರಣ ದಂಡನೆ ವಿಧಿüಸಬೇಕೆಂದು ಸಂಘ ಆಗ್ರಹಿಸಿದೆ.
ಆರೋಪಿ ನಿವೃತ್ತ ಶಿಕ್ಷಕ ವೆಂಕಟಪ್ಪ ಸೆರೆ
ಘಟನೆ ನಂತರ ಪರಾರಿಯಾಗಿದ್ದ ಆರೋಪಿ ವೆಂಕಟಪ್ಪನನ್ನ ಕಾಮಸಮುದ್ರ ಪೊಲೀಸರು ಬAಧಿಸಿದ್ದಾರೆ. ಜಾಲಪ್ಪ
ಆಸ್ಪತ್ರೆಗೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಸೌಮ್ಯ ಸ್ವಭಾವದ ಚಂದ್ರಮೌಳೇಶ್ವರ್
ಯಾರಿಗು ನೋವು ಕೊಡದ ಚಂದ್ರಮೌಳೇಶ್ವರ್ ಸೌಮ್ಯ ಸ್ವಭಾವದವರು. ಚಂದ್ರಮೌಳೇಶ್ವರ್ ಅಗಲಿಕೆಗೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ವಿಷಾದ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಎಸ್ ಮುನಿಸ್ವಾಮಿ ಸಂಬಂಧಿಕರಿಗೆ ಸಾಂತ್ವಾನ ಹೇಳಿ, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಬೇಕು ಸೂಚಿಸಿದ್ದಾರೆ. ಆಧಿಕಾರಿಗಳಿಗೆ ಕಠಿಣ ಕೆಲಸದ ವೇಳೆ ಸೂಕ್ತ ಪೊಲೀಸರು ಭದ್ರತೆ ಒದಗಿಸಬೇಕೆಂದು ತಿಳಿಸಿದ್ದಾರೆ.
ಘಟನೆ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ತಹಶೀಲ್ದಾರ್ ಕಾರು ಚಾಲಕ ನಾರಾಯಣಸ್ವಾಮಿ, ಕಾರು ವಾಪಸ್ ತರುವಂತೆ ಹೇಳಿದ್ರು, ಅಷ್ಟೊತ್ತಿಗೆ ಹೀಗಾಗಿದೆ. ಚಾಲಕನಾದ್ರು, ಸ್ವಂತ ಕುಟುಂಬದ ವ್ಯಕ್ತಿಯಂತೆ ನನ್ನನ್ನ ನೋಡಿ ಕೊಳ್ತಿದ್ರು ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಕುಟುಂಬಕ್ಕೆ 25 ಲಕ್ಷ ಪರಿಹಾರ
ಸರ್ವೆಗೆ ತೆರಳಿದ್ದ ವೇಳೆ ಕೊಲೆಯಾದ ತಹಶೀಲ್ದಾರ್ ಚಂದ್ರಮೌಳೇಶ್ವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಆದರೆ, ಅಧಿಕಾರಿ ಸಾವಿಗೆ 1 ಕೋಟಿ ರುಪಾಯಿ ಪರಿಹಾರ ನೀಡುವಂತೆ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸಂತಾಪ
ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಹತ್ಯೆ ಮಾಡಿರುವುದು ಆಘಾತಕಾರಿ ವಿಚಾರ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವಿಟರ್ನಲ್ಲಿ ತಿಳಿಸಿದ್ದಾರೆ.








