ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೊನಾಸುರ ಅಬ್ಬರಿಸಿಬೊಬ್ಬಿರಿಯುತ್ತಿದ್ದಾನೆ. ಅಮೆರಿಕಾದಲ್ಲಿ ಹೆಮ್ಮಾರಿ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಇದುವರೆಗೂ 89 ಸಾವಿರ ಮಂದಿ ಪ್ರಾಣತೆತ್ತಿದ್ದಾರೆ. 15 ಲಕ್ಷಕ್ಕೂ ಅಧಿಕ ಮಂದಿಗೂ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಕೊರೊನಾ ಮಹಾಮಾರಿಯನ್ನು ನಿಭಾಯಿಸುವಲ್ಲಿ ಅಮೆರಿಕಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಹಾಲಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕಾದ ವರ್ಚುಬಲ್ ಗ್ರ‍್ಯಾಜುವೇಷನ್ ಸೆರೆಮೊನಿಯನ್ನುದ್ದೇಶಿಸಿ ಬರಾಕ್ ಒಬಾಮಾ ಮಾತನಾಡಿದ್ದು, ಕೊರೊನಾ ಸಾಂಕ್ರಾಮಿಕ ಪಿಡುಗು ದೇಶಕ್ಕೆ ಕಟ್ಟಿದ್ದ ಪರದೆಯನ್ನ ಇನ್ನಿಲ್ಲದಂತೆ ಹರಿದು ಹಾಕಿದೆ. ಹಲವರು ತಾವು ಅಧಿಕಾರದಲ್ಲಿದ್ದೂ ಇಲ್ಲದಂತಾಗಿದ್ದಾರೆ ಎಂದು ಟ್ರಂಪ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.
ಇದೇ ವೇಳೆ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವರ್ಣಬೇಧದ ಬಗ್ಗೆ ಮಾತನಾಡಿದ ಒಬಾಮಾ, ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಗಳು ಎಲೆಮರೆಯ ಕಾಯಿಯಂತಿರುವ ಅಸಮಾನತೆಯನ್ನು ಸ್ಪಾಟ್ ಲೈಟ್ ಗೆ ಬರುವಂತೆ ಮಾಡುತ್ತವೆ. ಹಿಂದೆ ಕಪ್ಪು ಜನರು ಅನುಭವಿಸಿದ ಸಮಸ್ಯೆಗಳನ್ನು ಮತ್ತೆ ಮತ್ತೆ ನೆನಪಿಸುತ್ತವೆ ಎಂದರು.








