ಕೇಂದ್ರಕ್ಕೂ ಬಿಎಸ್ ವೈ ಸಾಕಾಗಿದ್ದಾರೆ, ಸಿಎಂ ಬದಲಾವಣೆ ಖಚಿತ : ಯತ್ನಾಳ್
ವಿಜಯಪುರ : ಸಿಎಂ ಬದಲಾವಣೆ ಆಗೋದು ಖಚಿತ. ಮುಖ್ಯಮಂತ್ರಿಗಳ ಬದಲಾವಣೆ ಆಗದಿದ್ರೆ ಪಕ್ಷ ನಡೆಯಲ್ಲ.
ಕೇಂದ್ರಕ್ಕೂ ಈಗಿರುವ ಸಿಎಂ ಸಾಕಾಗಿದ್ದಾರೆ. ಕೇಂದ್ರವೇ ಮುಖ್ಯಮಂತ್ರಿಯನ್ನ ಬದಲಿಸುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಡಿ ಪ್ರಕರಣದಲ್ಲಿ ಇಬ್ಬರು ಪ್ರಬಲ ನಾಯಕರಿದ್ದಾರೆ. ಒಬ್ಬರಿಗೊಬ್ಬರು ಬ್ಲ್ಯಾಕ್ ಮೇಲ್ ಮಾಡಿಕೊಂಡಿದ್ದಾರೆ.
ಹಾಗಾಗಿ ಈ ಪ್ರಕರಣದ ಫಲಿತಾಂಶ ಶೂನ್ಯ ಎಂದು ಹೇಳಿದರು. ಪ್ರಕರಣದಲ್ಲಿ ರಾಜಕೀಯ ಪ್ರಭಾವ ಹೆಚ್ಚಾಗುತ್ತಿರುವುದರಿಂದ ತನಿಖೆ ಸರಿಯಾಗಿ ನಡೆಯುತ್ತಿಲ್ಲ.
ಸಿಡಿ ಪ್ರಕರಣದಲ್ಲಿ ಓರ್ವ ಕಾಂಗ್ರೆಸ್ ಮತ್ತು ಮತ್ತೋರ್ವ ಬಿಜೆಪಿಗ ಇರೋದು ನಿಜ. ಡಿ.ಕೆ.ಶಿವಕುಮಾರ್ ಹೆಸರು ಹೊರ ಬಂದಿದ್ದು, ಸಿಎಂ ಯಡಿಯೂರಪ್ಪ ಇರೋವರೆಗೂ ಮತ್ತೊಬ್ಬ ಬಿಜೆಪಿಗನ ಹೆಸರು ಬೆಳಕಿಗೆ ಬರಲ್ಲ.
ಆ ಹೆಸರನ್ನ ಮುಚ್ಚಿ ಹಾಕುವ ಕೆಲಸವನ್ನ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದುವರಿದು ಸಿಎಂ ಕುಟುಂಬದ ವಿರುದ್ಧ ಆರೋಪಗಳ ಸುರಿ ಮಳೆಗೈದ ಯತ್ನಾಳ್, ಸಿಡಿ ಪ್ರಕರಣದಲ್ಲಿ ಸಿಎಂ ಕುಟುಂಬದವರೇ ಒಬ್ಬರಿದ್ದಾರೆ ಎಂದು ಬಾಂಬ್ ಸಿಡಿಸಿದರು.