“ವಿಜಯೇಂದ್ರರನ್ನ ಉತ್ತರಾಧಿಕಾರಿ ಮಾಡೋದೆ ಬಿಎಸ್ ವೈ ಕೊನೆಯ ಕನಸು”
ಧಾರವಾಡ : ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದೇ ಯಡಿಯೂರಪ್ಪ ಅವರ ಕೊನೆಯ ಕನಸು. ಧೃತರಾಷ್ಟ್ರ ತನ್ನ ಮಗ ದುರ್ಯೋಧನ ಅಯೋಗ್ಯನಾಗಿದ್ದರೂ ಪಟ್ಟಕ್ಕೇರಿಸಿದ್ದ. ಅದೇ ಕೆಲಸವನ್ನು ಯಡಿಯೂರಪ್ಪ ಮಾಡಲು ಹೊರಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾಯಕರನ್ನು ಮಾಡುವುದು ರಾಜ್ಯದ ಜನರೇ ಹೊರತು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಲ್ಲ ಎಂದು ಟಾಂಗ್ ನೀಡಿದರು. ಇನ್ನು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಂದಿದೆ.
ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಬಿಜೆಪಿಯ ಬಹುತೇಕ ಶಾಸಕರಿಗೆ ಸಮಾಧಾನ ಇಲ್ಲ. ಶಾಸಕರ ಕೆಲಸ ಆಗುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯುತ್ತಿಲ್ಲ. ಸಭೆ ಕರೆದರೆ ಎಲ್ಲರೂ ಮುಗಿಬೀಳುತ್ತಾರೆ ಎಂಬ ಭಯ ಯಡಿಯೂರಪ್ಪ ಅವರಿಗೆ ಇದೆ.
ಯತ್ನಾಳ ಹೇಳುವುದು ಸುಳ್ಳು ಎಂದು ಅರುಣ ಸಿಂಗ್ ಹೇಳುತ್ತಾರೆ. ಶಾಸಕರ ಭಾವನೆ ತಿಳಿದುಕೊಳ್ಳದಿದ್ದರೆ ಅವರು ಉಸ್ತುವಾರಿ ಆಗಿದ್ದು ಏನು ಪ್ರಯೋಜನಾ? ಅವರನ್ನು ಉಸ್ತುವಾರಿಯಾಗಿ ಮಾಡಿದ್ದಾರೂ ಏಕೆ ಎಂದು ಹರಿಹಾಯ್ದರು.
ಇದೇ ವೇಳೆ ಸಿಎಂ ವಿರುದ್ಧ ಕಿಡಿಕಾರಿದ ಯತ್ನಾಳ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ಅರುಣ ಸಿಂಗ್‍ರಿಗೆ ಪ್ರೀತಿ ಏಕೋ ತಿಳಿಯದು. ಆ ಮಹಾಲಕ್ಷ್ಮಿ ತಾಯಿ, ಧನ ಲಕ್ಷ್ಮಿಗೆ ಗೊತ್ತು. ಆದರೆ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದೇ ಯಡಿಯೂರಪ್ಪ ಅವರ ಕೊನೆಯ ಕನಸು.
ಧೃತರಾಷ್ಟ್ರ ತನ್ನ ಮಗ ದುರ್ಯೋಧನ ಅಯೋಗ್ಯನಾಗಿದ್ದರೂ ಪಟ್ಟಕ್ಕೇರಿಸಿದ್ದ. ಅದೇ ಕೆಲಸವನ್ನು ಯಡಿಯೂರಪ್ಪ ಮಾಡಲು ಹೊರಟಿದ್ದಾರೆ. ಶೀಘ್ರವೇ ಅವರ ಕುಟುಂಬ ರಾಜಕಾರಣ ಕೊನೆಯಾಗಲಿದೆ ಎಂದು ಗುಡುಗಿದರು.










