ಸಿಎಂ ಬಗ್ಗೆ ಮಾತಾಡೋರು ಆತ್ಮಾವಲೋಕನ ಮಾಡಿಕೊಳ್ಳಲಿ : ಬೊಮ್ಮಾಯಿ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಆದರೈ ಅವರ ಬಗ್ಗೆ ಅಪಸ್ವರ ಎತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವಪಕ್ಷದವರಿಗೆ ಟಾಂಗ್ ನೀಡಿದ್ದಾರೆ.
ಸಿಎಂ ರಾಜೀನಾಮೆ ಬಗ್ಗೆ ರಾಜ್ಯದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಈ ಮಧ್ಯೆ ಹೈಕಮಾಂಡ್ ಹೇಳಿದ್ರೆ ರಾಜೀನಾಮೆಗೆ ಸಿದ್ಧ ಎಂಬ ಸಿಎಂ ಬಿಎಸ್ ವೈ ಹೇಳಿಕೆ ಊಹಾಪೋಹಗಳಿಗೆ ರೆಕ್ಕೆಪುಕ್ಕಗಳನ್ನು ಕೊಟ್ಟಿದೆ.
ಈ ಮಧ್ಯೆ ಸಿಎಂ ಹೇಳಿಕೆ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಕೆಲಸಮಾಡ್ತಿದ್ದಾರೆ.
ಜನರ ಸಂಕಷ್ಟಕ್ಕೆ ಸಿಎಂ ಸ್ಪಂದಿಸ್ತಿದ್ದಾರೆ. ನಮ್ಮ ಸಿಎಂ ಅಭಿವೃದ್ಧಿ ಕೆಲಸಗಳ ಜೊತೆ ಕೊರೊನಾ ನಿಯಂತ್ರಣಕ್ಕೂ ಕೆಲಸ ಮಾಡ್ತಿದ್ದಾರೆ. ಆದರೆ, ನಾಯಕತ್ವ ಬದಲಾವಣೆಯ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ.
ನಾವು ಅವರ ಜೊತೆ ಮಾತನ್ನಾಡುವಾಗ ನೋವು ಗೊತ್ತಾಯ್ತು. ಅವರ ಮಾತುಗಳಲ್ಲಿ ಬೇಸರ ಇತ್ತು ಎಂದು ಹೇಳಿದರು.
ಇನ್ನು ಅವರಿಗೆ ಇತ್ತೀಚಿನ ಬೆಳವಣಿಗೆ ಬಗ್ಗೆ ತುಂಬಾ ಬೇಸರ ಇದ್ದಂತಿದೆ. ಹೈಕಮಾಂಡ್ ಕೂಡ ಯಡಿಯೂರಪ್ಪ ಸಾಮಥ್ರ್ಯವನ್ನು ಗುರುತಿಸಿದೆ.
ಯಾವುದೇ ಗೊಂದಲ ಹೈಕಮಾಂಡ್ ನಲ್ಲಿ ಇಲ್ಲ. ಯಡಿಯೂರಪ್ಪ ನಾಯಕತ್ವದ ಬಗ್ಗೆ ಗೊಂದಲ ಇಲ್ಲ. ಯಡಿಯೂರಪ್ಪ ನಾಯಕತ್ವದಲ್ಲೇ ನಾವು ಬಂದಿದ್ದೇವೆ. ಇವರ ನಾಯಕತ್ವದಲ್ಲೇ ಮುಂದೆಯೂ ಕೆಲಸ ಮಾಡುತ್ತೇವೆ. ಬರುವ ದಿನಗಳಲ್ಲಿ ಯಡಿಯೂರಪ್ಪ ಅವರದ್ದೇ ಶ್ರೀರಕ್ಷೆ ಇರಲಿದೆ ಎಂದರು.