ಬೊಮ್ಮಾಯಿ ಸಂಪುಟ | ವಿಜಯೇಂದ್ರಗೆ ಮಂತ್ರಿಗಿರಿಯೋ..? ಡಿಸಿಎಂ ಪಟ್ಟವೋ..?
ನವದೆಹಲಿ : ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಹಂತಕ್ಕೆ ಬಂದಂತೆ ಕಾಣುತ್ತಿದ್ದು, ಇಂದೇ ಸಚಿವ ಸಂಪುಟ ಫೈನಲ್ ಆಗುವ ಸಾಧ್ಯತೆಗಳಿವೆ. ಒಂದಿಷ್ಟು ಹೆಸರಗಳ ಪಟ್ಟಿಯನ್ನು ತೆಗೆದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಿಷ್ಠರ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ಈ ಮಧ್ಯೆ ಬೊಮ್ಮಾಯಿ ಸಚಿವ ಸಂಪುಟಕ್ಕೆ ವಿಜಯೇಂದ್ರ ಅವರು ಸೇರುತ್ತಾರಾ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಮಠಾಧೀಶರು ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಮುಂದಿನ ಚುನಾವಣೆ ಎದುರಿಸಲು ಯುವ ನಾಯಕರನ್ನು ಪಕ್ಷ ಹುಡುಕುತ್ತಿದ್ದು, ವಿಜಯೇಂದ್ರ ಅವರಿಗೆ ಈಗ ಜವಾಬ್ದಾರಿ ಕೊಟ್ಟರೇ ಸೂಕ್ತ ಎಂಬ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಬೊಮ್ಮಾಯಿ ಅವರು ಕೂಡ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದು, ಕೊನೆ ಕ್ಷಣದಲ್ಲಿ ವಿಜಯೇಂದ್ರ ಅವರಿಗೆ ಅಧಿಕಾರ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಮಂತ್ರಿಗಿರಿಯೋ..? ಡಿಸಿಎಂ ಪಟ್ಟವೋ..?
ಪಕ್ಷದ ಹೈಕಮಾಂಡ್ ಈ ಬಾರಿ ಸಚಿವ ಸಂಪುಟದಲ್ಲಿ ಯುವಕರಿಗೆ ಮಣೆ ಹಾಕಲು ಮುಂದಾಗಿದೆ. ಅದರಂತೆ ವಿಜಯೇಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿ ಕೊಡುವುದಾದರೇ ಅವರನ್ನು ಸಚಿವರನ್ನಾಗಿ ಮಾಡುತ್ತಾರೋ ಅಥವಾ ಬಿಎಸ್ ವೈಗೆ ಋಣ ಸಂದಾಯ ಮಾಡುವ ದೃಷ್ಠಿಯಿಂದ ಡಿಸಿಎಂ ಪಟ್ಟದಲ್ಲಿ ಕೂರಿಸುತ್ತಾರೋ ಕಾದು ನೋಡಬೇಕಾಗಿದೆ.









