Basavaraja Bommai – ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ಬಳಕೆ ಕಡ್ಡಾಯ
ನಾಡಿನಾದ್ಯಂತ ಇಂದು 67ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಕನ್ನಡ ನಾಡು ಪುಣ್ಯದ ನಾಡಾಗಿದೆ.
ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ್ದು, ಈ ಹೋರಾಟದಲ್ಲಿ ಹಿರಿಯರಾದ ನಿಜಲಿಂಗಪ್ಪ, ಕುವೆಂಪು ಅವರಂತಹ ಮಹಾನ್ ಪುರುಷರು ಪಾಲ್ಗೊಂಡು ನಮಗೆಲ್ಲರಿಗೂ ಸಮೃದ್ಧ ಕರ್ನಾಟಕದ ಕೊಡುಗೆ ನೀಡಲು ಕಾರಣರಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಇಂದು ಶಿಕ್ಷಣ, ಆರೋಗ್ಯ, ಉದ್ಯೋಗ, ವಾಣಿಜ್ಯ, ಕೈಗಾರಿಕೆಯಂತಹ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.
ಭಾರತ ದೇಶದ ಭವಿಷ್ಯವನ್ನು ಬರೆಯುವಂತಹ ಶಕ್ತಿಯನ್ನು ಹೊಂದಿದೆ ಎಂದು ಸಿಎಂ ಹೇಳಿದರು.
ನಮ್ಮ ರಾಜ್ಯದಲ್ಲಿ ಬುದ್ಧಿವಂತಿಕೆಗೆ ಯಾವುದೇ ಕೊರತೆಯಿಲ್ಲ. ಕನ್ನಡ ನಾಡು ಜ್ಞಾನದ ಬೀಡಾಗಿದೆ, ಇಂದಿಗೂ ಅಂತಃಕರಣವನ್ನು ಉಳಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಿದೆ.
ಪ್ರಸ್ತುತದ ಸನ್ನಿವೇಶದಲ್ಲಿ ಸುಂದರ ನಾಡನ್ನು ಕಟ್ಟುವ ಸಂಕಲ್ಪವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಿದೆ.
ಈ ಮೂಲಕ ಒಗ್ಗಟ್ಟಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದು ಸಿಎಂ ಕರೆಕೊಟ್ಟರು.
ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ಬಳಕೆಯನ್ನು ಕಡ್ಡಾಯ ಮಾಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.