ದೇವೇಗೌಡರನ್ನು ಭೇಟಿಯಾಗುವ ಅವಶ್ಯಕತೆ ಏನಿತ್ತು : ಬೊಮ್ಮಾಯಿ ವಿರುದ್ಧ ಪ್ರೀತಮ್ ಗೌಡ ಗರಂ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಕ್ಕೆ ಬಿಜೆಪಿ ಶಾಸಕ ಪ್ರೀತಮ್ ಗೌಡ ಫುಲ್ ಗರಂ ಆಗಿದ್ದಾರೆ. ಅಲ್ಲದೆ ತಮಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅಡ್ಜಸ್ಟ್ ಮೆಂಟ್ ಸರ್ಕಾರ ನಡೆಸಿದರೆ ಹೇಗೆ ? ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ವಿರೋಧಿಯಾಗಿ ರಾಜಕಾರಣ ಮಾಡುತ್ತಿದ್ದೇವೆ. ಈ ಭಾಗಕ್ಕೆ ಸಚಿವ ಸ್ಥಾನ ನೀಡುವುದು ಹಾಗಿರಲಿ ಕೊನೆ ಪಕ್ಷ ಕಾರ್ಯಕರ್ತರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಬೇಡವೇ ? ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇವೇಗೌಡರನ್ನು ಭೇಟಿಯಾಗುವ ಅವಶ್ಯಕತೆ ಏನಿತ್ತು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಮುಂದುವರೆದು ಬೊಮ್ಮಾಯಿ ವಿರುದ್ಧ ಕಿಡಿಕಾರಿದ ಪ್ರೀತಂ ಗೌಡ, ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿವೆ. ಆಗ ನಾವು ಜೆಡಿಎಸ್ ವಿರುದ್ಧವೇ ಚುನಾವಣೆ ನಿಲ್ಲಬೇಕು. ಅವರ ವಿರುದ್ಧ ರಾಜಕೀಯ ಹೇಳಿಕೆಗಳನ್ನು ನೀಡಬೇಕು. ಬೊಮ್ಮಾಯಿ ನಡೆ ನೋಡಿದರೆ ಆ ರೀತಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಾರೋ ಇಲ್ಲವೋ ಎಂಬ ಅನುಮಾನವಿದೆ ಎಂದರು.