ಡಿಜೆ ಹಳ್ಳಿ ಗಲಭೆ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಕೆಜಿಹಳ್ಳಿ, ಡಿಜೆ ಹಳ್ಳಿ ಶಾಂತ ಆಗಿದೆ. ಪ್ರಕರಣದ ಬಗ್ಗೆ ನಾನಾರೀತಿಯಲ್ಲಿ ವ್ಯಾಖ್ಯಾನ ಆಗ್ತಿದೆ. ಸದ್ಯಕ್ಕೆ ಎಲ್ಲವನ್ನೂ ಹೇಳುವುದಕ್ಕೆ ಆಗುವುದಿಲ್ಲ. ವೀಡಿಯೋ ಫೊಟೇಜ್ ಪರಿಶೀಲನೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಎಸ್ ಡಿಪಿಐ ಪಾತ್ರ ಇರುವುದು ಕಂಡು ಬಂದಿದೆ. ಈಗಾಗಲೇ ಎಸ್‌ಡಿಪಿಐನ ನಾಲ್ಕು ಜನರನ್ನ ಬಂಧಿಸಲಾಗಿದೆ. ಇನ್ನೂ ಆಳವಾಗಿ ತನಿಖೆ ನಡೆಸಲಾಗ್ತಿದೆ ಎಂದಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಬೊಮ್ಮಾಯಿ ಅವರು ಅಕ್ಕಪಕ್ಕದ ಪ್ರದೇಶದಿಂದ ಎಸ್‌ಡಿಪಿಐ ಕಾರ್ಯಕರ್ತರು ಬಂದಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಹಿಂದೆ ಯಾರು ಇದ್ದಾರೆ, ಈ ಹಿಂದಿನ ಪ್ರಕರಣಗಳ ಬಗ್ಗೆಯೂ ಆಳವಾಗಿ ತನಿಖೆ ನಡೆಸ್ತೇವೆ. ಇದನ್ನ ಆಳವಾಗಿ ತನಿಖೆ ಮಾಡಿ ಪತ್ತೆ ಹಚ್ಚುವವರೆಗೂ ವಿಶ್ರಮಿಸುವುದಿಲ್ಲ ಎಂದಿದ್ದಾರೆ.
ಇನ್ನೂ ಪೊಲೀಸರು ದಕ್ಷತೆಯಿಂದ ಕೆಲಸಮಾಡುತ್ತಿದ್ದಾರೆ. ರಾಜ್ಯದ ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಎಸ್ ಡಿಪಿಐ ನಡೆಸಿರುವ ಇನ್ನಿತರೇ ಕೃತ್ಯಗಳ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದೇವೆ ಈ ಘಟನೆ ಹಿಂದಿರುವ ಎಲ್ಲಾ ಅಂಶಗಳನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತೆ. ರಾಜಕೀಯ ಪಕ್ಷಗಳಿರಬಹುದು, ರಾಜಕೀಯ ಪಕ್ಷಗಳಲ್ಲಿನ ವೈಮನಸ್ಸಿರಬಹುದು, ಸಂಘಟನೆಗಳ ಕೈವಾಡ ಇರಬಹುದು… ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುತ್ತೆ . ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಎಲ್ಲಾ ಕ್ರಮ ಜರುಗಿಸಲು ಸನ್ನದ್ಧರಾಗಿದ್ದೇವೆ. ಈ ಗಲಭೆಗೆ ಕಾರಣ ಆದವರು ಯಾರೇ ಆಗಲಿ ಕ್ರಮ ಜರುಗಿಸುತ್ತೇವೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ.








