ಚಿತ್ರದುರ್ಗ: ಬಸವ ಜಯಂತಿಯ ಅಂಗವಾಗಿ ಕೂಡಲ ಸಂಗಮದ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವ ದಳ, ಚಿತ್ರದುರ್ಗದ ಬಸವ ಮಂಟಪದಲ್ಲಿ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಅಧ್ಯಕ್ಷರು ಹಾಗೂ ಖ್ಯಾತ ಬುಡಕಟ್ಟು ಜಾನಪದ ಸಂಶೋಧಕರಾದ ಮಾಲತೇಶ್ ಅರಸ್ ಅವರಿಗೆ ಪ್ರತಿಷ್ಠಿತ “ಬಸವಸೇವಾ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಬಸವ ಮಂಟಪದಲ್ಲಿ ನಡೆದ ಈ ವೈಭವೋತ್ಸವದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಆಗಮಿಸಿದವರು ತಮ್ಮದೇ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸವಿತಾ ಸಮಾಜದವರು ಧ್ವಜಾರೋಹಣ ನೆರವೇರಿಸಿದರು, ಮಡಿವಾಳ ಸಮಾಜದವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ವ ಶರಣೆಯರು ತೊಟ್ಟಿಲು ಪೂಜೆಯಲ್ಲಿ ಭಾಗವಹಿಸಿದರು.
ಮುಖ್ಯ ಆಕರ್ಷಣೆಯಾಗಿ ಮುಸ್ಲಿಮ್ ಧರ್ಮದ ಶಬ್ರಿನಾ ಮಹಮ್ಮದ್ ಅವರಿಂದ ವಚನ ಚಿಂತನೆ ಮತ್ತು ಅಧ್ಯಾತ್ಮಿಕ ಭಾಷಣ ನಡೆಯಿತು. ಪುಟಾಣಿ ಮಕ್ಕಳಿಂದ ಮನಮೋಹಕ ವಚನ ನೃತ್ಯ ಕಾರ್ಯಕ್ರಮಕ್ಕೆ ಸೌಂದರ್ಯ ಹೆಚ್ಚಿಸಿತು.
ಇದೇ ಕಾರ್ಯಕ್ರಮದಲ್ಲಿ ಸಾಧಕರಾದ ಟಿ. ರುದ್ರಮುನಿ, ನಾಗರಾಜ್ ಸಂಗಮ್, ಡಾ. ಶರತ್ ಬಾಬು ಹಾಗೂ ತಿಪ್ಪೇಸ್ವಾಮಿ ಅವರಿಗೂ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿತ್ತು.
ಈ ಭವ್ಯ ಸಮಾರಂಭದಲ್ಲಿ ದಾನೇಶ್ವರಿ ಮಾತಾಜಿ ಸೇರಿದಂತೆ ಅನೇಕ ಗಣ್ಯರು, ಬೋಧಕರು, ಶರಣರು ಹಾಗೂ ವಿವಿಧ ಕ್ಷೇತ್ರಗಳ ಹಿರಿಯರು ಉಪಸ್ಥಿತರಿದ್ದರು
ಇಂತಹ ಅಂತರಧರ್ಮ, ಅಂತರಸಾಮಾಜಿಕ ಸಾಮರಸ್ಯದ ಕಾರ್ಯಕ್ರಮಗಳ ಮೂಲಕ ಬಸವ ತತ್ತ್ವಗಳ ಅಭಿವ್ಯಕ್ತಿ ಮತ್ತು ಸಮಾನತೆಯ ಸಂದೇಶ ನೀಡುವುದು ಬಸವಣ್ಣನವರ ಚಿಂತನೆಗೆ ನೀಡುವ
ನಿಜವಾದ ಸೇವೆಯಾಗಿದೆ ಎಂಬುದು ಈ ಕಾರ್ಯಕ್ರಮದಿಂದ ಮತ್ತೆ ಸಾರಲಾಯಿತು.








