Basavraj bommai: ರಾಮನಗರದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ..
ರಾಮನಗರ, ಮಂಡ್ಯ, ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದ್ದು, ಹಲವು ಪ್ರದೇಶಗಳು ಜಲವೃತಗೊಂಡಿವೆ. ರಾಮನಗರದ ಮಳೆ ಪೀಡಿತ ಪ್ರದೇಶಗಳಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರಾಮನಗರದ ಮಾರುತಿ ಬಡಾವಣೆಯಲ್ಲಿ ಭಕ್ಷಿಕೆರೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಯಾಗಿರುವುದನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದರು. ಭಕ್ಷಿಕೆರೆ ಒಡೆದು 100 ರಿಂದ 150 ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಭಕ್ಷಿಕೆರೆ ನಂತರ ರೈತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಪರಿಹಾರದ ಭರವಸೆ ನೀಡಿದರು. ಮಳೆಯಿಂದ ಕುಸಿದು ಬಿದ್ದಿರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೇ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಭಾರೀ ಮಳೆಯ ಹಿನ್ನೆಲೆಯಲ್ಲಿ ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ದೈನಂದಿನ ಜನಜೀವನ ಅಸ್ತವ್ಯಸ್ತವಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.








