ಬೆಂಗಳೂರು : ನಗರದ ಸ್ವಚ್ಛತೆ ಕಾಪಾಡುವ ಸ್ವಚ್ಛತಾ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಬಿಬಿಎಂಪಿ ವಿನೂತನವಾಗಿ “ಸುವಿಧಾ ಕ್ಯಾಬಿನ್” ಅನ್ನು ನಿರ್ಮಿಸಲಾಗಿದೆ. ಇಂದು ಮಲ್ಲೇಶ್ವರಂ ವಾರ್ಡ್-45ರ ಯಶವಂತಪುರ ಆರ್.ಟಿ.ಒ ಕಛೇರಿ ಆವರಣದಲ್ಲಿ ಉಪಮುಖ್ಯಮಂತ್ರಿಗಳು ಡಾ. ಸಿ.ಎನ್.ಅಶ್ವತ್ಥ ನಾರಾಯಣ್, “ಸುವಿಧಾ ಕ್ಯಾಬಿನ್ ಉದ್ಘಾಟನೆ ಮಾಡಿದರು.
ಸುವಿಧಾ ಕ್ಯಾಬಿನ್ ನಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ಬಟ್ಟೆ ಬದಲಾಯಿಸುವ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮಗುವಿಗೆ ಹಾಲುಣಿಸಲು ಸ್ಥಳಾವಕಾಶ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕಪಾಟು, ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಫ್ಯಾನ್, ನೀರಿನ ಸಂಪರ್ಕ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನಗರವನ್ನು ಸ್ವಚ್ಛವಾಗಿಡುವ ಸ್ವಚ್ಛತಾ ಯೋಧರ ಸುರಕ್ಷತೆ, ಯೋಗಕ್ಷೇಮ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಬಿಬಿಎಂಪಿಯು ವಿನೂತನವಾಗಿ “ಸುವಿಧಾ ಕ್ಯಾಬಿನ್” ಯೋಜನೆ ಜಾರಿಗೊಳಿಸಿದೆ. ಇಂದು ಯಶವಂತಪುರ ಆರ್.ಟಿ.ಒ ಕಛೇರಿ ಆವರಣದಲ್ಲಿ ಉದ್ಘಾಟನೆಗೊಂಡಿದೆ. ಶೀಘ್ರವೇ ಜಕ್ಕೂರು ವಾರ್ಡ್-5 ವ್ಯಾಪ್ತಿಯಲ್ಲಿ ಕೂಡ ಆರಂಭವಾಗಲಿದೆ.
ಪೌರಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್ಗಳ ಮಸ್ಟರಿಂಗ್ ಕೇಂದ್ರಗಳ ಬಳಿ ಕಂಟೈನರ್ನಿಂದ ಕ್ಯಾಬಿನ್ ನಿರ್ಮಿಸಿದ್ದು, ಪ್ರಾಯೋಗಿಕವಾಗಿ(Pilot Project) 2 ಕಡೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲಾ 198 ವಾರ್ಡ್ಗಳಲ್ಲಿಯೂ ಯೋಜನೆ ಜಾರಿಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.








