BBMP BUDGET – ರಾತ್ರೋ ರಾತ್ರಿ ಕದ್ದು ಮುಚ್ಚಿ ಬಜೆಟ್ ಮಂಡಿಸಿದ ಬಿಬಿಎಂಪಿ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾತ್ರೋರಾತ್ರಿ ಬಜೆಟ್ (Budget 2022-23) ಮಂಡನೆ ಮಾಡಿದೆ. ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ 10,480 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡಿಸಿದರು. ವಿಶೇಷಚೇತನರ ಅಭಿವೃದ್ಧಿಗೆ 370 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 346 ಕೋಟಿ, ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ, ಆರೋಗ್ಯ ವಲಯಕ್ಕೆ 75 ಕೋಟಿ ಮೀಸಲಿಡಲಾಗಿದೆ.
ತಡರಾತ್ರಿ 11.24ಕ್ಕೆ ಆಯ್ಯವ್ಯಯ ಮಂಡನೆ ಆಗಿರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ. ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಪಾಲಿಕೆ ಸೋತಿದೆ. ಸದ್ಯ ತರಾತುರಿಯಲ್ಲಿ ಹಲವು ಬಜೆಟ್ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಲಾಗಿದೆ.
ಪ್ರತಿವರ್ಷವೂ ಬಜೆಟ್ಗಳನ್ನು ಮುಂದಿನ ಆರ್ಥಿಕ ವರ್ಷ ಆರಂಭವಾಗುವುದಕ್ಕೆ ಕನಿಷ್ಠ ಮೂರು ವಾರ ಮೊದಲು ಅಂಗೀಕರಿಸಬೇಕು ಎನ್ನುವ ನಿಯಮವಿದೆ. ಅದರಂತೆ ಮಾರ್ಚ್ 10ರ ಒಳಗೆ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ ಬಜೆಟ್ ಮಂಡನೆ ತಡವಾದ ಕಾರಣ, ಬಿಬಿಎಂಪಿ ಕಾಯ್ದೆಯ 196ನೇ ವಿಧಿ ಉಲ್ಲಂಘನೆಯಾದಂತೆ ಆಗಿದೆ.








