ಬೀದಿನಾಯಿಗಳ ಆಹಾರ ಪೂರೈಕೆಗೆ 15 ಲಕ್ಷ : ಸ್ಪಷ್ಟನೆ ಕೊಟ್ಟ ಬಿಬಿಎಂಪಿ
ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲಯಲ್ಲಿ ಬೀದಿನಾಯಿಗಳ ಹಾಗೂ ವಿವಿಧ ಪ್ರಾಣಿಗಳಿಗೆ ಮೇವು ಒದಗಿಸಲು ಬಿಬಿಎಂಪಿ 15 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದು ಕೃಷ್ಣನ ಲೆಕ್ಕಾಚಾರ ಎಂದು ಟೀಕೆ ಮಾಡಿದ್ರು. ಹೀಗಾಗಿ ಇದಕ್ಕೆ ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿರುವ 3,09,975 ನಾಯಿಗಳಿಗೆ, ಪ್ರತಿ ನಾಯಿಗೆ 5.60 ರೂ ಗಳಂತೆ ಒಟ್ಟು 11,60,000 ರೂ ಬಿಡುಗಡೆ ಮಾಡಲಾಗಿದೆ. ಗೋಶಾಲೆಗಳಿಗೆ ಪ್ರತಿ ದಿನ ಐದು ಟನ್‍ಗಳಷ್ಟು ಮೇವು ಹಾಗೂ ದೊಡ್ಡ ಪ್ರಾಣಿಗಳ ರಕ್ಷಣಾ ಕಾರ್ಯವನ್ನು ಕ್ಯೂಪಾ ಸಂಸ್ಥೆಗೆ 2 ಟನ್?ಗಳಷ್ಟು ಎಂಟು ದಿನಗಳಿಗೆ ಮೇವು ಪೂರೈಕೆ ಮಾಡಲು ಆದೇಶ ನೀಡಲಾಗಿದೆ. ಪ್ರತಿಟನ್ ಗೆ 6 ಸಾವಿರದಂತೆ ದನಗಳಿಗೆ 56 ಟನ್ ಮೇವಿಗೆ 3,40,000 ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗ ತಿಳಿಸಿದೆ.
ಅಲ್ಲದೆ ಲಾಕ್ ಡೌನ್ ನಿಂದಾಗಿ ಬೀದಿನಾಯಿಗಳಿಗಾಗುವ ಆಹಾರದ ಸಮಸ್ಯೆ ನೀಗಿಸಲು ಪ್ರಾಣಿಪ್ರಿಯರು, ಇಂಡಿಯನ್ ವೆಲ್ಫೇರ್ ಆರ್ಗನೈಸೇಷನ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪಶುಪಾಲನಾ ವಿಭಾಗ ಅರ್ಥಪೂರ್ಣ ಕಾರ್ಯಕ್ರಮ ಕೈಗೊಂಡಿದೆ.
ಆಹಾರ ಪೂರೈಕೆ ಮಾಡುವ ಸಂದರ್ಭದ ಫೋಟೋಗಳನ್ನು ಸಂಬಂಧಪಟ್ಟ ವಲಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲಾಗುತ್ತಿದ್ದು, ಸಂಪೂರ್ಣ ಮೇಲ್ವಿಚಾರಣೆ ಇವರದೇ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದೆ.









