ಬೆಂಗಳೂರು : ಸೋಲಿಗೆ ಹದೆರಿ ಬಿಜೆಪಿ ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಆಪ್, ಬಿಬಿಎಂಪಿ ವಾರ್ಡ್ ಸಂಖ್ಯೆಗಳನ್ನು 250 ಕ್ಕೆ ಹೆಚ್ಚಳ ಮಾಡಲು ಶಾಸಕ ಎಸ್. ರಘು ನೇತೃತ್ವದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಹೊಸ ವಾರ್ಡ್ ಗಳ ರಚನೆ ಮತ್ತು ಚುನಾವಣೆಗೆ ಮೀಸಲಾತಿ ಮರು ನಿಗದಿ ಮಾಡಬೇಕಾಗಿರುವುದರಿಂದ ಕೂಡಲೇ ಚುನಾವಣೆ ನಡೆಸಲು ಆಗುವುದಿಲ್ಲ ಎಂಬ ಕುಂಟು ನೆಪ ಹೇಳಿ ರಾಜ್ಯ ಸರ್ಕಾರ ಕರ್ನಾಟಕ ಪೌರಸಭೆಗಳ ಕಾಯ್ದೆಯನ್ನು ವಿಧಾನಸೌಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತನವನ್ನು ತೋರಿಸುತ್ತದೆ.
ಬಿಜೆಪಿ ಆಂತರಿಕ ಸಮೀಕ್ಷೆಯ ಪ್ರಕಾರ, ಕೂಡಲೇ ಬಿಬಿಎಂಪಿ ಚುನಾವಣೆ ನಡೆದರೆ ಹೀನಾಯವಾಗಿ ಸೋಲುವುದಾಗಿ ವರದಿ ಬಂದಿದೆ.
ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಸೇರಿದಂತೆ ಸದನದಲ್ಲಿ ಅನೇಕ ಜನವಿರೋಧಿ ರೈತ ವಿರೋಧಿ ಕಾರ್ಮಿಕ ವಿರೋಧಿ ಮಹಿಳಾ ವಿರೋಧಿ ಮಸೂದೆಗಳನ್ನು ಮಂಡಿಸಿ ಉಳಿಗಮಾನ್ಯ ಪದ್ಧತಿ ಜೀತದಾಳು ಪದ್ಧತಿ ಮತ್ತು ವಸಾಹತು ಶಾಹಿ ಪದ್ಧತಿಗಳನ್ನು ಮತ್ತೆ ಪುನರ್ ಸಪ್ರತಿಷ್ಠಾಪಿಸಿರುವ ಬಿಜೆಪಿಯ ಕೆಟ್ಟ ಆಡಳಿತಕ್ಕೆ ಜನರು ಬೇಸತ್ತಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಗಳಿಂದಾಗಿ ಅಧಿಕಾರವನ್ನು ಹಿಡಿಯುವುದು ಅಸಾಧ್ಯ ಎಂಬುದು ಬಿಜೆಪಿ ಅರಿವಾಗಿದೆ. ಈ ಕಾರಣ ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆನ್ನು ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಇನ್ನು ಬಿಜೆಪಿ ತನ್ನ ಹಿಂಬಾಲಕರನ್ನು ತೃಪ್ತಿಪಡಿಸಲು ಬಿಜೆಪಿ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿರುವ ಆಪ್, ಸರ್ಕಾರದ ನಿರ್ಧಾರಕ್ಕೆ ಕಿಂಚಿತ್ತೂ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನೀಚ ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದೆ.