ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರು ಕೊರೊನಾ ಹೊಡೆತಕ್ಕೆ ತತ್ತರಿಸಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಿಂದ ಸಿಲಿಕಾನ್ ಸಿಟಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಸೋಂಕು ಪೀಡಿತರ ಸಂಖ್ಯೆ 80ರ ಗಡಿದಾಟಿದೆ. ಇದರ ಜೊತೆಗೆ ದೆಹಲಿಗೆ ಹೋಗಿ ಬಂದ 64 ತಬ್ಲಿಘಿ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ.
ದೆಹಲಿ ನಿಜಾಮುದ್ದಿನ್ ನಲ್ಲಿ ನಡೆದ ತಬ್ಲಿಘಿ ಸಮಾವೇಶ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದವರಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ಆದರೂ ಸಹ 64 ಸದಸ್ಯರು ಮಾತ್ರ ಈವರೆಗೆ ಪರೀಕ್ಷೆಗೆ ಒಳಗಾಗಿಲ್ಲ. ಇವರ ಮನೆ ವಿಳಾಸ ಪತ್ತೆ ಮಾಡಿದರೂ ಅಲ್ಲಿ ಅವರ ಕುರಿತಂತೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಧಿಕಾರಿಗಳ ಕೈಗೆ ಸಿಗದೇ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಪಾದರಾಯನಪುರದಲ್ಲಿ ತಬ್ಲಿಘಿ ಸಮಾವೇಶಕ್ಕೆ ತೆರಳಿ ವಾಪಾಸ್ ಬಂದವರಿಂದ 17 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 64 ಜನ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಹೆಚ್ಚಾಗಿದೆ. ಒಂದು ವೇಳೆ ಇವರಿಗೆ ಕೊರೊನಾ ಕಂಡು ಬಂದರೆ ಹೆಚ್ಚು ಜನರಿಗೆ ಹರಡುವ ಸಾಧ್ಯತೆ ಇದೆ.








