ಬೆಂಗಳೂರು: ಆದಷ್ಟು ಬೇಗ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಬ್ದುಲ್ ವಾಜಿದ್ ಅವರು, ‘2006ರ ನ. 24 ರಿಂದ 2010ರ ಏಪ್ರಿಲ್ 22ರವರೆಗೆ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಇರಲಿಲ್ಲ. ಬಿಬಿಎಂಪಿಗೆ ನಗರಸಭೆ ಹಾಗೂ 110 ಹಳ್ಳಿಗಳ ಸೇರ್ಪಡೆ ಸಲುವಾಗಿ ಚುನಾವಣೆ ನಡೆಸಲು ಮೀನಾಮೇಷ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣೆ ನಡೆದಿತ್ತು. 198 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆ ಸಮಸ್ಯೆಗಳಿವೆ. ಈಗ ಮತ್ತೆ 60 ಹಳ್ಳಿಗಳ ಸೇರ್ಪಡೆ ಮಾಡಲು ಸರ್ಕಾರ ಹೊರಟಿರೋದು ಚುನಾವಣೆ ಮುಂದೂಡುವ ತಂತ್ರವಾಗಿದೆ ಎಂದು ದೂರಿದರು.
ಹೊಸದಾಗಿ 27 ವಾರ್ಡ್ಗಳನ್ನು ಸೇರ್ಪಡೆ ಗೊಳಿಸುವುದು ಮತ್ತು ಬಿಬಿಎಂಪಿ ಮಸೂದೆಯನ್ನು ಜಂಟಿ ಸಲಹಾ ಸಮಿತಿ ಪರಿಶೀಲನೆಗೆ ಒಳಪಡಿಸಲು ಕಾಲಾವಕಾಶ ಕೇಳುವುದು ಚುನಾವಣೆ ಮುಂದೂಡಲು ಸರ್ಕಾರ ಅನುಸರಿಸುತ್ತಿರುವ ಕಾರ್ಯತಂತ್ರದ ಭಾಗವಾಗಿದೆ. ಈಗಾಗಲೇ 198 ವಾರ್ಡ್ಗಳ ಮರುವಿಂಗಡಣೆ ಮಾಡಲಾಗಿದೆ. ನ. 30ಕ್ಕೆ ಮತದಾರರ ಪರಿಷ್ಕøತ ಪಟ್ಟಿಯೂ ಸಿದ್ದವಾಗಲಿದೆ. ಮೀಸಲಾತಿ ಮಾಡಲು ಒಂದು ವಾರ ಸಮಯ ಸಾಕು. ಇದಾದ ತಕ್ಷಣ ಚುನಾವಣೆ ನಡೆಸಬಹುದು’ ಎಂದು ಅಬ್ದುಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ‘ಈ ಹಿಂದೆಯೂ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 3 ವರ್ಷ ಆಡಳಿತಾಧಿಕಾರಿ ನೇಮಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಮತದಾರರಿಗೆ ವಂಚನೆ ಮಾಡಲಾಗಿತ್ತು ಎಂದು ಕಿಡಿಕಾರಿದ ವಾಜಿದ್, ಚುನಾವಣೆಯನ್ನು ಸಕಾಲದಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದಶನ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗುತ್ತೇವೆ’ ಎಂದು ತಿಳಿಸಿದ್ದಾರೆ.








