ವೀಕೆಂಡ್ ಪಬ್ ಬಾರ್ ಸಂಸ್ಕೃತಿ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬೆಳೆಯಲಿ : ಬಿ.ಸಿ.ಪಾಟೀಲ್ ಕರೆ
ಕೋಲಾರ : ನಗರದವರಲ್ಲಿ ಕೃಷಿಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ. ವೀಕೆಂಡ್ ಪಬ್ ಬಾರ್ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಹುಟ್ಟುವಂತಾಗಬೇಕು. ರೈತರೊಂದಿಗೆ ನಾವಿದ್ದೇವೆ ಸರ್ಕಾರವಿದೆ ಎಂಬ ಸಂದೇಶ ಆತ್ಮವಿಶ್ವಾಸ ಮೂಡಿಸುವುದೇ ನನ್ನ ಗುರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಆಯೋಜಿಸಿದ್ದ “ರೈತರೊಂದಿಗೊಂದು ದಿನ” ವೇದಿಕೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಬಿ.ಸಿ.ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ಈಗಿರುವ ಶೇ.40 ಮೀಸಲಾತಿಯನ್ನು ಶೇ.50ಕ್ಕೆ ಏರಿಸುವ ಚಿಂತನೆ ತಮ್ಮದಾಗಿದೆ. ಅಲ್ಲದೇ ಆಕಸ್ಮಿಕವಾಗಿ ಮೃತಪಟ್ಟ ರೈತರ ಪರಿಹಾರವನ್ನೂ ಸಹ ಹೆಚ್ಚಿಸುವ ಉದ್ದೇಶವಿದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಹಾಳಾದರೆ ದೇಶ ಉಳಿಯುವುದಿಲ್ಲ. ಕೃಷಿಯನ್ನು ನಂಬದಿದ್ದರೆ ಬದುಕೇ ಇಲ್ಲ. ಸರ್ಕಾರವನ್ನು ರೈತರು ಹುಡುಕಿಕೊಂಡು ಹೋಗುವುದಲ್ಲ. ಸರ್ಕಾರವೇ ರೈತನ ಹತ್ತಿರ ಬರುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತನನ್ನು ಆತ್ಮವಿಶ್ವಾಸಿಯನ್ನಾಗಿಸುವುದೇ ನನ್ನ ಉದ್ದೇಶ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಕೃಷಿ ಸಚಿವನಾದ ಆರಂಭದಲ್ಲಿ ಕೃಷಿ ತಜ್ಞರ ಅಧಿಕಾರಿಗಳ ಸಭೆ ನಡೆಸಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಿ ಕಾರಣ ಕೇಳಿದಾಗ ಸಮಗ್ರ ಕೃಷಿ ಪದ್ಧತಿ ಇದಕ್ಕೆ ಪರಿಹಾರ ಎಂಬ ಅಭಿಪ್ರಾಯ ಕೇಳಿಬಂದಿತು. ಕೋವಿಡ್ ಲಾಕ್ಡೌನ್ನಲ್ಲಿ ಕೃಷಿ ಚಟುವಟಿಕೆ ನಿಲ್ಲಬಾರದು ರೈತರಿಗೆ ಟೋಲ್ಗಳೆಲ್ಲ ಮುಕ್ತವಾಗಿ ತೆರೆದು ಕೃಷಿ ಚಟುವಟಿಕೆ ಮಳೆ ಬೆಳೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. ಜಗತ್ತಿಗೆ ಅನ್ನ ನೀಡುವ ಆತ್ಮಸ್ಥೈರ್ಯಿ. ಕೋಲಾರ ರೈತರ ಆತ್ಮಸ್ಥೈರ್ಯ ರಾಜ್ಯಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ರೈತರೊಂದಿಗೊಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರ ಕೃಷಿ ಲಾಭದಾಯಕವಾಗಬೇಕು. ನಾನು ರೈತನ ಮಗ. ಬರೀ ಬತ್ತ ಬೆಳೆದರೆ ಲಾಭಬರದು. ಕಬ್ಬು ವರ್ಷದ ಬೆಳೆ ಮಾತ್ರ ಎಂಬ ಅನುಭವವಿದೆ. ಸಮಗ್ರ ಕೃಷಿ ಮಾಡಿದ ರೈತ ಒಂದಲ್ಲ ಒಂದು ರೀತಿ ಲಾಭದಾಯಕವಾಗುತ್ತಾನೆ. ಮಂಡ್ಯದ ಲಕ್ಷ್ಮೀದೇವಮ್ಮ,ಕೋಲಾರದ ಅಶ್ವತ್ಥಮ್ಮ ಇವರುಗಳು ಭೂಮಿ ನಂಬಿ ಸಮಗ್ರಕೃಷಿಯನ್ನು ಅನುಸರಿಸಿ ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ. ಕೃಷಿ ಇಲಾಖೆ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ರೈತರಿಗೆ ಆತ್ಮಬಲ ತುಂಬಲು ಅವರ ಸಮಸ್ಯೆಗಳನ್ನು ಆಲಿಸಲು ಪರಿಹಾರ ಕಲ್ಪಿಸಲು ನಾನು ಕಾರ್ಯಕ್ರಮ ಆಯೋಜಿಸಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಯುವಕರು ಕಾಣದ ದೂರದ ಊರಿನಲ್ಲಿ ಕಾರ್ಖಾನೆಗೆ ಎಂದು ಬಂದು ಅನ್ನಕಾಣದೇ ನರಳುವುದಕ್ಕಿಂತ ಊರಿನಲ್ಲಿರುವ ಜಮೀನಿನಲ್ಲಿ ಭೂಮಿತಾಯಿಯನ್ನು ನಂಬಿ ಬದುಕಬೇಕೆಂದು ಸ್ಫೂರ್ತಿಯ ಮಾತುಗಳನ್ನಾಡಿದರು.
ಜ.7 ರಂದು ವಿಧಾನಸೌಧದ ಮುಂಭಾಗ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಎಂಬ 40 ” ಕೃಷಿ ಸಂಜೀವಿನಿ” ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರೈತಸಂಪರ್ಕ ಕೇಂದ್ರಕ್ಕೆ ಕೃಷಿ ಸಂಜೀವಿನಿ ವಾಹನ ನೀಡುವ ಉದ್ದೇಶವಿದೆ.ಗ್ರಾ.ಪಂಚಾಯಿತಿಗಳಿಗೊಂದು ಮಣ್ಣುಪರೀಕ್ಷಾ ಕೇಂದ್ರ ಹೊಂದುವ ಉದ್ದೇಶ ಕರ್ನಾಟಕ ಸರ್ಕಾರದ್ದಾಗಿದ್ದು,ಕೇಂದ್ರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ರೈತ ತನ್ನ ಬೆಳೆಯನ್ನು ಸಂಸ್ಕರಣೆ ಮಾಡಿ ತಾನೇ ಬೆಲೆ ನಿಗದಿಪಡಿಸಬೇಕು. ಜ.11 ರಿಂದ ಮೈಸೂರಿನಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ರೈತರಿಗೆ ಒಟ್ಟು 500 ರೈತರಿಗೆ ಆಹಾರ ಸಂಸ್ಕರಣೆ ಮಾರ್ಕೇಟಿಂಗ್ ಮಾಡುವ ಒಂದು ವಾರಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಸತ್ಯಭಾಮ ಸ್ವಾಗತಿಸಿ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.ಮಾಲೂರು ಶಾಸಕ ನಂಜೇಗೌಡ, ಕೋಲಾರ ಜಿಲ್ಲಾ ಕೃಷಿ ಅಧಿಕಾರಿ ಉಪವಿಭಾಗಾಧಿಕಾರಿ ಸೋಮಶೇಖರ್, ಸಿಇಒ ನಾಗರಾಜ್, ಜಿ.ಪಂ,ತಾ.ಪಂ.ನಗರಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel