ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದ – ಮನೀಷ್ ಪಾಂಡೆ, ಕೇದಾರ್ ಜಾಧವ್ ಔಟ್
ಮನೀಷ್ ಪಾಂಡೆ ಮತ್ತು ಕೇದಾರ್ ಜಾಧವ್ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಯಾಗೋದು ಕನಸಿನ ಮಾತು.
ಯಾಕಂದ್ರೆ ಬಿಸಿಸಿಐ ಪ್ರಕಟಿಸಿರುವ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮನೀಷ್ ಪಾಂಡೆ ಮತ್ತು ಕೇದಾರ್ ಜಾಧವ್ ಅವರ ಹೆಸರಿಲ್ಲ. ಹೀಗಾಗಿ ಮತ್ತೆ ಟೀಮ್ ಇಂಡಿಯಾಗೆ ಪ್ರವೇಶ ಪಡೆಯುವುದು ಅನುಮಾನವಾಗಿದೆ.
ಈ ನಡುವೆ ಹೊಡಿ ಬಡಿ ಆಟಗಾರ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬಿ ಗ್ರೇಡ್ ನಿಂದ ಎ ಗ್ರೇಡ್ ಗೆ ಬಡ್ತಿ ಪಡೆದುಕೊಂಡಿದ್ದಾರೆ.
ಇನ್ನುಳಿದಂತೆ ಭುವನೇಶ್ವರ್ ಕುಮಾರ್ ಎ ಗ್ರೇಡ್ ನಿಂದ ಬಿ ಗ್ರೇಡ್‍ಗೆ ಹಾಗೂ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬಿ ಗ್ರೇಡ್ ನಿಂದ ಸಿ ಗ್ರೇಡ್ ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ.
ಇತ್ತೀಚಿನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಇದೇ ಮೊದಲ ಬಾರಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಸಿ ಗ್ರೇಡ್ ಪಡೆದುಕೊಂಡಿದ್ದಾರೆ.
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯ ಆಟಗಾರರ ಸಂಭಾವಣೆ ಈ ರೀತಿಯಲ್ಲಿದೆ.
ಎ ಪ್ಲಸ್ ಗ್ರೇಡ್ ಪಡೆದುಕೊಂಡಿರುವ ಆಟಗಾರ ಏಳು ಕೋಟಿ ರೂ.
ಎ ಗ್ರೇಡ್ ಆಟಗಾರ ಐದು ಕೋಟಿ ರೂಪಾಯಿ, ಬಿ ಗ್ರೇಡ್ ಆಟಗಾರ – ಮೂರು ಕೋಟಿ ರೂ ಹಾಗೂ ಸಿ ಗ್ರೇಡ್ ಆಟಗಾರ ಒಂದು ಕೋಟಿ ರೂಪಾಯಿ ಪಡೆಯಲಿದ್ದಾರೆ.
2020 ಅಕ್ಟೋಬರ್ ನಿಂದ 2021ರ ಸೆಪ್ಟಂಬರ್ ತನಕ ಈ ಗುತ್ತಿಗೆ ಒಪ್ಪಂದ ಚಾಲ್ತಿಯಲ್ಲಿರುತ್ತೆ.
ಎ ಪ್ಲಸ್ ನಲ್ಲಿರುವ ಆಟಗಾರರ ಪಟ್ಟಿ ಈ ರೀತಿ ಇದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರಿತ್ ಬೂಮ್ರಾ ಅವರು ಸ್ಥಾನ ಪಡೆದಿದ್ದಾರೆ.
ಎ ಗ್ರೇಡ್ ನಲ್ಲಿ ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಕೆ.ಎಲ್. ರಾಹುಲ್, ಶಿಖರ್ ಧವನ್, ಮಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ರಿಷಬ್ ಪಂತ್ ಇದ್ದಾರೆ.
ಇನ್ನು ಬಿ ಗ್ರೇಡ್ ನಲ್ಲಿ ವೃದ್ದಿಮಾನ್ ಸಾಹಾ, ಭುವನೇಶ್ವರ್ ಕುಮಾರ್, ಶಾರ್ದೂಲ್ ಥಾಕೂರ್, ಉಮೇಶ್ ಯಾದವ್, ಮಯಾಂಕ್ ಅಗರ್ ವಾಲ್ ಇದ್ದಾರೆ.
ಸಿ ಗ್ರೇಡ್ ನಲ್ಲಿ, ನವದೀಪ್ ಸೈನಿ, ಕುಲದೀಪ್ ಯಾದವ್, ದೀಪಕ್ ಚಾಹರ್, ಶುಬ್ಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮಹಮ್ಮದ್ ಸಿರಾಜ್ ಇದ್ದಾರೆ.