ತವರು ವೇಳಾಪಟ್ಟಿ ಪ್ರಕಟ : ಮಾರ್ಚ್ ತನಕ ಟೀಮ್ ಇಂಡಿಯಾ ಫುಲ್ ಬ್ಯೂಸಿ
ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಬಿಡುವು ಅನ್ನುವುದೇ ಇಲ್ಲ. ವರ್ಷದ 365 ದಿನವೂ ಕ್ರಿಕೆಟ್ ಆಡುವ ಟೀಮ್ ಇಂಡಿಯಾ ಮುಂದಿನ ವರ್ಷ ಮಾರ್ಚ್ ವರಗೂ ಫುಲ್ ಬ್ಯೂಸಿ ಇರಲಿದೆ. ಇಂಗ್ಲೆಂಡ್ ಪ್ರವಾಸದ ನಂತರ ಐಪಿಎಲ್ ನಲ್ಲಿ ಬ್ಯುಸಿಯಾಗಿರುವ ಟೀಮ್ ಇಂಡಿಯಾ ನಿರಂತರವಾಗಿ ಕ್ರಿಕೆಟ್ ಆಡಲಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ.
ಇದು ಮುಗಿದ ಬೆನ್ನಲ್ಲೇ ಭಾರತ ತಂಡಕ್ಕೆ 4 ಟೆಸ್ಟ್, 3 ಒಡಿಐ ಮತ್ತು ಬರೋಬ್ಬರಿ 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಸವಾಲು ಎದುರಾಗಲಿದೆ.
ಮೊದಲು ನ್ಯೂಜಿಲೆಂಡ್ ತಂಡವು ಭಾರತದಲ್ಲಿ 3 ಟಿ 20 ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗುತ್ತದೆ. ಮೊದಲ ಟಿ 20 ಪಂದ್ಯ ನವೆಂಬರ್ 17 ರಂದು ಜೈಪುರದಲ್ಲಿ ನಡೆಯಲಿದೆ. ಎರಡನೇ ಟಿ 20 ನವೆಂವರ್ 19 ರಂದು ರಾಂಚಿಯಲ್ಲಿ ನಡೆಯಲಿದೆ. ನವೆಂಬರ್ 21 ರಂದು ಕೋಲ್ಕತ್ತಾದಲ್ಲಿ ಮೂರನೇ ಟಿ 20 ಪಂದ್ಯ ನಡೆಯಲಿದೆ.
ಮೊದಲ ಟೆಸ್ಟ್ ನವೆಂಬರ್ 25 ರಿಂದ ನವೆಂಬರ್ 29 ರವರೆಗೆ ಕಾನ್ಪುರದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಡಿಸೆಂಬರ್ 3 ರಿಂದ ಡಿಸೆಂಬರ್ 7 ರವರೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ತಂಡದ ಪ್ರವಾಸ ಮುಗಿದ ಕೂಡಲೇ ವೆಸ್ಟ್ ಇಂಡೀಸ್ ಭಾರತಕ್ಕೆ ಬರಲಿದೆ. ವೆಸ್ಟ್ ಇಂಡೀಸ್ ಭಾರತದಲ್ಲಿ 3 ಏಕದಿನ ಪಂದ್ಯ ಮತ್ತು 3 ಟಿ 20 ಪಂದ್ಯ ಆಡಲಿದೆ. ಮೊದಲ ಏಕದಿನ ಪಂದ್ಯವು ಫೆಬ್ರವರಿ 6 ರಂದು ಅಹಮದಾಬಾದ್ನಲ್ಲಿ ನಡೆಯಲಿದೆ. ಫೆಬ್ರವರಿ 9 ಮತ್ತು ಫೆಬ್ರವರಿ 12 ರಂದು ಜೈಪುರ ಮತ್ತು ಕೋಲ್ಕತಾದಲ್ಲಿ 2 ಮತ್ತು 3ನೇ ಏಕದಿನ ಪಂದ್ಯ ನಡೆಯಲಿದೆ. ನಂತರ ಮೊದಲ ಟಿ -20 ಒಡಿಶಾದ ಕಟಕ್ನಲ್ಲಿ ನಡೆಯಲಿದೆ. ಮುಂದಿನ 2 ಟಿ 20 ಪಂದ್ಯಗಳು ಫೆಬ್ರವರಿ 18 ಮತ್ತು 20 ರಂದು ವೈಜಾಗ್ ಮತ್ತು ತಿರುವನಂತಪುರದಲ್ಲಿ ನಡೆಯಲಿದೆ.
ವಿಂಡೀಸ್ ತವರಿಗೆ ಹಿಂದುರುಗಿದ ಬೆನ್ನಲ್ಲೇ ಶ್ರೀಲಂಕಾ ಭಾರತಕ್ಕೆ ಕಾಲಿಡಲಿದೆ. ಶ್ರೀಲಂಕಾ ಭಾರತದ ವಿರುದ್ಧ 2 ಟೆಸ್ಟ್ ಮತ್ತು 3 ಟಿ 20 ಆಡಲಿದೆ. ಬೆಂಗಳೂರು ಮತ್ತು ಮೊಹಾಲಿಯಲ್ಲಿ ಟೆಸ್ಟ್ ಮ್ಯಾಚ್ ನಡೆದರೆ, ಮೊಹಾಲಿ, ಧರ್ಮಶಾಲಾ ಮತ್ತು ಲಕ್ನೋದಲ್ಲಿ ಟಿ20 ಪಂದ್ಯಗಳು ನಡೆಯಲಿವೆ.









