ಐಪಿಎಲ್ 2021 – ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಆಡುತ್ತಿಲ್ಲ.. ಮೇ 9ರಂದು ಸಿಎಸ್ ಕೆ ಮತ್ತು ಪಂಜಾಬ್ ಕಿಂಗ್ಸ್ ಹೋರಾಟ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದೆ, ಏಪ್ರಿಲ್ 9ರಿಂದ ಮೇ 30ರವರೆಗೆ ಈ ಬಾರಿಯ ಟೂರ್ನಿಯ ಪಂದ್ಯಗಳು ನಡೆಯಲಿವೆ.
ಬೆಂಗಳೂರು, ದೆಹಲಿ, ಕೊಲ್ಕತ್ತಾ, ಅಹಮದಾಬಾದ್, ಚೆನ್ನೈ, ಮುಂಬೈ ನಲ್ಲಿ ಈ ಬಾರಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ.
ಐಪಿಎಲ್ ಪಂದ್ಯ ಏಪ್ರಿಲ್ 9ರಿಂದ ಶುರುವಾದ್ರೂ ಬೆಂಗಳೂರಿನಲ್ಲಿ ಪಂದ್ಯ ನಡೆಯುವುದು ಮೇ 9ರಂದು. ಆದ್ರೆ ಬೆಂಗಳೂರಿನಲ್ಲಿ ಈ ಬಾರಿ ಆರ್ ಸಿಬಿ ಪಂದ್ಯಗಳನ್ನು ನೋಡುವ ಅವಕಾಶವಿಲ್ಲ. ಈ ಬಾರಿಯ ಟೂರ್ನಿಯಲ್ಲಿ ತಂಡಗಳಿಗೆ ತವರು ನೆಲದ ಲಾಭ ಪಡೆಯುವ ಅವಕಾಶವಿಲ್ಲ. ಬದಲಾಗಿ ತಟಸ್ಥ ತಾಣದಲ್ಲಿ ಆಡಬೇಕಿದೆ.
ಆದ್ರೂ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡಿಗರ ಆಟವನ್ನು ನೋಡಬಹುದು. ಒಂದು ವೇಳೆ ಪ್ರೇಕ್ಷಕರಿಗೆ ಅವಕಾಶ ನೀಡಿದ್ರೆ ಮಾತ್ರ.
ಅಂದ ಹಾಗೇ ಮೇ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯ ಟೂರ್ನಿಯ 31ನೇ ಪಂದ್ಯವಾಗಿದೆ. ಭಾನುವಾರ ಮಧ್ಯಾಹ್ನ 3.30ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನುಳಿದಂತೆ ಮೇ 10ರಂದು ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ.
ಮೇ 12ರಂದು ಸಿಎಸ್‍ಕೆ ಮತ್ತು ಕೆಕೆಆರ್ ತಂಡಗಳು ಸೆಣಸಾಟ ನಡೆಸಲಿವೆ.
ಮೇ 13ರಂದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್, ಮೇ 15ರಂದು ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ಹಾಗೂ ಮೇ 16ರಂದು ಸಿಎಸ್‍ಕೆ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.
ಹಾಗೇ ಮೇ 18ರಂದು ಕೆಕೆಆರ್ ಮತ್ತು ರಾಜಸ್ತಾನ ರಾಯಲ್ಸ್, ಮೇ 19ರಂದು ಸನ್ ರೈಸರ್ಸ್ ಹೈದ್ರಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮೇ 21ರಂದು ಕೆಕೆಆರ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಹಾಗೂ ಮೇ 22ರಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳು ಫೈಟ್ ಮಾಡಲಿವೆ.
ಒಟ್ಟು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 10 ಪಂದ್ಯಗಳು ನಡೆಯಲಿವೆ. ಮೇ 9ರಿಂದ ಮೇ 22ರವರೆಗೆ ಆರ್‍ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಇನ್ನುಳಿದ ಆರು ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿವೆ.