ಬಿಸಿಸಿಐ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆಯಾ….? ಮೋದಿ ಸರ್ಕಾರ ಬಿಸಿಸಿಐ ಮೇಲೂ ತನ್ನ ಹಿಡಿತ ಸಾಧಿಸಿಕೊಳ್ಳಲಿದೆಯಾ ? ಈ ಪ್ರಶ್ನೆಗಳಿಗೆ ಹೌದು ಅನ್ನೋ ಸಣ್ಣ ಸುಳಿವೊಂದು ಸಿಗುತ್ತಿದೆ. ಯಾಕಂದ್ರೆ ಬಿಸಿಸಿಐ ಅಂದ್ರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೇರಿದಂತೆ ವಿಶ್ವದ ಎಲ್ಲಾ ಕ್ರಿಕೆಟ್ ಮಂಡಳಿಗಳನ್ನು ತನ್ನ ಕೈ ಬೆರಳಿನಲ್ಲೇ ಆಟವಾಡಿಸುವ ಮಂಡಳಿಯಾಗಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. ದುಡ್ಡಿನ ಮುಂದೆ ಎಲ್ಲಾ ಅಧಿಕಾರವೂ ಸಿಗುತ್ತದೆ ಎಂಬ ಮಾತಿಗೆ ಬಿಸಿಸಿಐ ಉತ್ತಮ ನಿದರ್ಶನವಾಗಿತ್ತು. ಅಷ್ಟೇ ಯಾಕೆ ಭಾರತ ಸರ್ಕಾರದ ಕೆಲವೊಂದು ನಿರ್ಧಾರಗಳನ್ನು ಪ್ರಶ್ನೆ ಮಾಡುವಂತಹ ಮಟ್ಟಕ್ಕೂ ಬೆಳೆದು ನಿಂತಿತ್ತು.
ಆದ್ರೆ ಈಗ ಬದಲಾಗಿದೆ… ಬಿಸಿಸಿಐನ ಒಳಜಗಳದಿಂದ ತನ್ನ ಅಧಿಕಾರದ ವ್ಯಾಪ್ತಿಯನ್ನು ಕೊಂಚ ಮಟ್ಟಿಗೆ ಕಳೆದುಕೊಂಡಿದೆ. ಇದೀಗ ಸೌರವ್ ಗಂಗೂಲಿ ಅಧ್ಯಕ್ಷರಾದ ನಂತರ ಬಿಸಿಸಿಐ ಹೊ¸ ಸ್ವರೂಪ ಪಡೆದುಕೊಳ್ಳುವತ್ತ ಹೆಜ್ಜೆಯನ್ನಿಡುತ್ತಿದೆ. ಅದೇನೇ ಇರಲಿ, ಇದೀಗ ಕೊರೋನಾ ವೈರಸ್ನಿಂದಾಗಿ ಬಿಸಿಸಿಐನ ಬೊಕ್ಕಸಕ್ಕೂ ದೊಡ್ಡ ಹೊಡೆತವಾಗಿದೆ. ಅದ್ರಲ್ಲೂ ಐಪಿಎಲ್ ಪಂದ್ಯ ಮುಂದೂಡಿರುವುದು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಹೇಗಾದ್ರೂ ಮಾಡಿ ಐಪಿಎಲ್ ಟೂರ್ನಿಯನ್ನು ಸಂಘಟಿಸಲೇಬೇಕು ಅನ್ನೋ ಉಮೇದಿನಲ್ಲಿದೆ.
ಅಷ್ಟೇ ಅಲ್ಲ, ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿಯಾದ್ರೂ ಐಪಿಎಲ್ ಟೂರ್ನಿಯನ್ನು ಸಂಘಟಿಸಬೇಕು ಅನ್ನೋ ಪ್ಲಾನ್ ನಲ್ಲಿದೆ. ಮುಂದಿನ ಅಕ್ಟೋಬರ್ – ನವೆಂಬರ್ ನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಗ್ಗೆ ಮೇ 28ರ ಐಸಿಸಿ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಒಂದು ವೇಳೆ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದ್ರೆ ಆಗ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಲೆಕ್ಕಚಾರವನ್ನು ಹಾಕಿಕೊಂಡಿದೆ ಬಿಸಿಸಿಐ.
ಆದ್ರೆ ಬಿಸಿಸಿಐನ ಈ ಲೆಕ್ಕಚಾರಕ್ಕೆ ಭಾರತ ಸರ್ಕಾರ ಅಡ್ಡಗಾಲು ಹಾಕಿದೆ. ಐಪಿಎಲ್ನ ಭವಿಷ್ಯವನ್ನು ನಿರ್ಧಾರ ಮಾಡೋದು ಬಿಸಿಸಿಐ ಅಲ್ಲ.. ಭಾರತ ಸರ್ಕಾರ ಅಂತ ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜೀಜ್ ಹೇಳಿದ್ದಾರೆ. ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರ. ಅದು ಕೂಡ ದೇಶದ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕ್ರೀಡಾಕೂಟಗಳು ನಡೆಯಬೇಕು ಎಂಬುದನ್ನು ನಾವು ಬಯಸುತ್ತೇವೆ. ಆದ್ರೆ ದೇಶದ ಜನರ ಆರೋಗ್ಯ ಮುಖ್ಯವಾದದ್ದು. ಇಡೀ ದೇಶ, ವಿಶ್ವವೇ ಕೋವಿಡ್-19 ವಿರುದ್ಧ ಹೋರಾಡುತ್ತಿದೆ. ನಮ್ಮ ಪ್ರಮುಖ ಗುರಿ ಕೋವಿಡ್ 19 ವಿರುದ್ಧ ಹೋರಾಡುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ದೇಶ, ವಿದೇಶದ ಆಟಗಾರರಿರುತ್ತಾರೆ. ಅದೇ ರೀತಿ ಪ್ರೇಕ್ಷಕರು ಕೂಡ ಕುತೂಹಲದಿಂದ ವೀಕ್ಷಣೆ ಮಾಡುತ್ತಿರುತ್ತಾರೆ. ಐಪಿಎಲ್ ಟೂರ್ನಿಯು ಸುಮಾರು 530 ಮಿಲಿಯನ್ ಡಾಲರ್ ಬೆಲೆ ಬಾಳುವಂತಹ ಟೂರ್ನಿಯಾಗಿದೆ. ಹೀಗಾಗಿ ಬಿಸಿಸಿಐ, ಫ್ರಾಂಚೈಸಿಗಳು, ಆಟಗಾರರಿಗೆ ಭಾರೀ ನಷ್ಟವೂ ಆಗಿದೆ. ಒಂದಂತೂ ಸತ್ಯ, ದುಡ್ಡು ಎಷ್ಟೇ ನಷ್ಟವಾಗಲಿ,,, ಮತ್ತೆ ದುಡ್ಡು ಮಾಡಬಹುದು. ಆದ್ರೆ ದುಡ್ಡಿಗಿಂತಲೂ ಆರೋಗ್ಯ ಮುಖ್ಯ. ಎಷ್ಟೇ ದುಡ್ಡಿದ್ರೂ ಆರೋಗ್ಯವೇ ಸರಿ ಇಲ್ಲ ಅಂದ ಮೇಲೆ ದುಡ್ಡು ಇದ್ರೂ ಏನು ಪ್ರಯೋಜನ…?








