ಯುಎಇ ಐಪಿಎಲ್ ಟೂರ್ನಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್..!
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಹೌದು, ನಮಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಈಗಾಗಲೇ ಜೈವಿಕ ಸುರಕ್ಷತೆಯ ಬಗ್ಗೆ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಮಾಹಿತಿಯನ್ನು ನೀಡಿದೆ. ಈಗಾಗಲೇ ನಾವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಅನ್ನು ಬಿಡುಗಡೆ ಮಾಡಿದ್ದೇವೆ. ಎಲ್ಲಾ ಫ್ರಾಂಚೈಸಿಗಳು ಕಡ್ಡಾಯವಾಗಿ ಎಸ್‍ಒಪಿ ನಿಯಮಗಳನ್ನು ಪಾಲಿಸಬೇಕು. ಇದನ್ನು ನೋಡಿಕೊಳ್ಳಲು ಪ್ರತ್ಯೇಕ ಸಮಿತಿಯನ್ನು ರಚಿಸಿದ್ದೇವೆ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯು ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಇನ್ನೊಂದೆಡೆ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕುತ್ತಿದೆ. ಪಾರದರ್ಶಕತೆ ಹೆಚ್ಚು ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ ಪ್ರಾಯೋಜಕರನ್ನು ಆಯ್ಕೆ ಮಾಡಲಾಗುವುದು.
ಈಗಾಗಲೇ ಬೈಜೂಸ್ ಆಪ್, ಕೋಕಾ ಕೋಲಾ ಮತ್ತು ಪತಂಜಲಿ ಸಂಸ್ಥೆಗಳು ಈ ಬಾರಿಯ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿವೆ. ನೋಡಬೇಕು ಯಾರ ಪಾಲಾಗುತ್ತದೆ ಅನ್ನೋದನ್ನು….!








