ಐಪಿಎಲ್ 2020 – ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಅನುಮತಿ ಪತ್ರ ರವಾನೆ
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ. ಈಗಾಗಲೇ ಬಿಸಿಸಿಐಗೆ ಭಾರತ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿಯ ಕುರಿತಂತೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಅನುಮತಿ ಪತ್ರವನ್ನು ರವಾನಿಸಿದೆ.
ಈಗಾಗಲೇ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಹಾಗೇ ಕೋವಿಡ್-19ನಿಂದಾಗಿ ಐಪಿಎಲ್ ಟೂರ್ನಿ ಯುಎಇಗೆ ಶಿಫ್ಟ್ ಆಗಿದೆ.
ಐಪಿಎಲ್ ಟೂರ್ನಿಯ ಆತಿಥ್ಯ ವಹಿಸುವುದು ನಮಗೆ ಹೆಮ್ಮೆಯನ್ನುಂಟು ಮಾಡಿದೆ. ಎಲ್ಲಾ ರೀತಿಯ ಸವಲತ್ತುಗಳನ್ನು ನಾವು ಹೊಂದಿದ್ದೇವೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶೇಕ್ ನಹಾಯಾನ್ ಮಬಾರಕ್ ಆಲ್ ನಹಾಯನ್ ಹೇಳಿದ್ದಾರೆ.
ಯುಎಇ ನಲ್ಲಿ ಕೋವಿಡ್-19 ಪರಿಸ್ಥಿತಿ ಹತೋಟಿಗೆ ಬಂದಿದೆ. ಹೀಗಾಗಿ ಬಿಸಿಸಿಐ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು
ಆಯೋಜಿಸಲು ಮುಂದೆ ಬಂದಿದೆ. ಇದರಲ್ಲಿ ಸಂಶಯವೇ ಇಲ್ಲ. ಯುಎಇನಲ್ಲಿ ಹೈ ಪ್ರೊಫೈಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಟೂರ್ನಿಯ ಯಶಸ್ಸಿಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಿದ್ದೇವೆ. ಭಾರತ ಮತ್ತು ವಿಶ್ವದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಈ ಟೂರ್ನಿಯನ್ನು ಕಾತರದಿಂದ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿ ಯುಎಇನ ಮೂರು ಮೈದಾನಗಳಲ್ಲಿ ನಡೆಯಲಿದೆ. ಅಬುದಾಬಿ, ದುಬೈ ಮತ್ತು ಶಾರ್ಜಾದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಐಪಿಎಲ್‍ನ ಎಂಟು ತಂಡಗಳು ಆಗಸ್ಟ್ 20ರನಂತರ ಯುಎಇಗೆ ಪ್ರಯಾಣ ಬೆಳೆಸಲಿವೆ. ಆಟಗಾರರು ಜೈವಿಕ ಸುರಕ್ಷತೆಗೆ ಹೋಗುವ ಮುನ್ನ ಆರು ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಲಿದ್ದಾರೆ. ಟೂರ್ನಿಗೆ ಬಿಸಿಸಿಐ, ಐಪಿಎಲ್, ಯುಎಇ ಸರ್ಕಾರ, ಆರೋಗ್ಯ ಇಲಾಖೆ ಟೂರ್ನಿಯ ಮೇಲೆ ನಿಗಾ ವಹಿಸಲಿದೆ.
ಅಂದ ಹಾಗೇ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2014ರಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲಾಗಿತ್ತು.








