ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ಆಹ್ವಾನ ನೀಡಿರುವ ಬಿಸಿಸಿಐ
2020ರ ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಬಿಡ್ ಸಲ್ಲಿಸಲು ಬಿಸಿಸಿಐ ಆಸಕ್ತರನ್ನು ಆಹ್ವಾನಿಸಿದೆ. ಆಗಸ್ಟ್ 14ರಂದು ಬಿಡ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ನಾಲ್ಕು ವಾರಗಳ ಬಳಿಕ ಬಿಸಿಸಿಐ ಬಿಡ್ ಯಾರು ಗೆದ್ದಿದ್ದಾರೆ ಎಂಬುದನ್ನು ಘೋಷಣೆ ಮಾಡಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ. ಕೋವಿಡ್ -19 ಮಾರ್ಗಸೂಚಿ, ಎಸ್ಒಪಿ ಹಾಗೂ ಜೈವಿಕ ಸುರಕ್ಷತೆಯೊಂದಿಗೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲಿದೆ.
ಈ ನಡುವೆ ಚೀನಾ ಮೂಲದ ವಿವೋ ಕಂಪೆನಿಯು ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತ್ತು. ಚೀನಾ -ಭಾರತ ಗಡಿ ಸಮಸ್ಯೆಯಿಂದಾಗಿ ದೇಶಾದ್ಯಂತ ಚೀನಾ ವಸ್ತುಗಳ ವಿರುದ್ಧ ಅಭಿಯಾನ ಶುರುವಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರ ಕೂಡ
ಚೀನಾದ 50ಕ್ಕೂ ಹೆಚ್ಚು ಆಪ್ ಗಳನ್ನು ನಿಷೇಧಿಸಿತ್ತು. ಇನ್ನೊಂದೆಡೆ ಆರ್ ಆರ್ ಎಸ್ ನ ಸ್ವದೇಶಿ ಜಾಗೃತಿ ಮಂಚ್ ಸಂಘಟನೆಯೂ ವಿವೋ ಪ್ರಾಯೋಜಕತ್ವ ವಹಿಸಿದ್ರೆ ಭಾರತದಲ್ಲಿ ಐಪಿಎಲ್ ಬ್ಯಾನ್ ಮಾಡುವ ಅಭಿಯಾನವನ್ನು ಶುರು ಮಾಡಿತ್ತು. ಹೀಗಾಗಿ ಬಿಸಿಸಿಐ ಕೂಡ ವಿವೋ ಕಂಪೆನಿಯ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ.
ಇದೀಗ ಹೊಸ ಪ್ರಾಯೋಜಕರ ಹುಡುಕಾಟದಲ್ಲಿರುವ ಬಿಸಿಸಿಐ ಐಪಿಎಲ್ ಟೂರ್ನಿಯ ಪ್ರಾಯೋಜಕತ್ವಕ್ಕಾಗಿ ಬಿಡ್ ಅರ್ಜಿಗಳನ್ನು ಸಲ್ಲಿಸುವಂತೆ ಆಹ್ವಾನ ಮಾಡಿದೆ.
ಈಗಾಗಲೇ ಕೋಕಾ ಕೋಲಾ, ಬೈಜೂಸ್ ಮತ್ತು ಪತಂಜಲಿ ಕಂಪೆನಿಗಳು ಆಸಕ್ತಿ ಹೊಂದಿರುವುದಾಗಿ ಹೇಳಿವೆ. ಹಾಗೇ ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಹಲವು ಷರತ್ತುಗಳನ್ನು ವಿಧಿಸಿವೆ. ಬಿಡ್ ನಲ್ಲಿ ಅರ್ಜಿ ಸಲ್ಲಿಸುವ ಕಂಪೆನಿಗಳ ವಾರ್ಷಿಕ ವಹಿವಾಟು 300 ಕೋಟಿ ರೂಪಾಯಿ ಇರಬೇಕು. ಅಂತಹ ಕಂಪೆನಿಗಳು ಮಾತ್ರ ಬಿಡ್ ಸಲ್ಲಿಸಬಹದು.








