ಚಾಂಪಿಯನ್ಸ್ ಟ್ರೋಫಿ, ಟಿ-ಟ್ವೆಂಟಿ ಹಾಗೂ ಏಕದಿನ ವಿಶ್ವಕಪ್ ಟೂರ್ನಿ ಆಯೋಜನೆಗೆ ಬಿಸಿಸಿಐ ಬಿಡ್ ಸಲ್ಲಿಕೆ..!
ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಭಾರತದಲ್ಲಿ ಪ್ರತಿಷ್ಠಿತ ಐಸಿಸಿ ಟೂರ್ನಿಯನ್ನು ಆಯೋಜಿಸುವುದು ಬಿಸಿಸಿಐನ ಲೆಕ್ಕಚಾರ. ಹೀಗಾಗಿ 2023ರ ವಿಶ್ವಕಪ್ ನಂತರ ಮೂರು ಐಸಿಸಿ ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧಾರ ಮಾಡಿದೆ.
ಬಿಸಿಸಿಐ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದಕ್ಕೆ ಅಪೆಕ್ಸ್ ಸಮಿತಿಯೂ ಸಹಮತವನ್ನು ಸೂಚಿಸಿದೆ.
ಹೌದು, 2023ರ ವಿಶ್ವಕಪ್ ಆತಿಥ್ಯದ ನಂತರ ಬಿಸಿಸಿಐ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ, ಟಿ-ಟ್ವೆಂಟಿ ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲು ಮುಂದಾಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2028ರ ಟಿ-ಟ್ವೆಂಟಿ ವಿಶ್ವಕಪ್ ಹಾಗೂ 2031ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಬಿಡ್ ಸಲ್ಲಿಸಲಿದೆ.
ಮುಂಬರುವ ವಿಶ್ವಕಪ್ ಟೂರ್ನಿಗಳಲ್ಲಿ 14 ತಂಡಗಳು ಭಾಗವಹಿಸಲಿವೆ. ಅದೇ ರೀತಿ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ 16ರಿಂದ 20 ತಂಡಗಳು ಸ್ಪರ್ಧಿಸಲಿವೆ.
ಇನ್ನು ಕೋವಿಡ್ ಸೋಂಕಿನಿಂದಾಗಿ ದೇಶಿ ರಣಜಿ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ದೇಶಿ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಬಿಸಿಸಿಐ ಪರಿಹಾರ ಧನವನ್ನು ನೀಡಿಲ್ಲ. ಹೀಗಾಗಿ ರಣಜಿ ಟೂರ್ನಿಯ ಆಟಗಾರರಿಗೆ ಪರಿಹಾರ ಧನವನ್ನು ನೀಡುವುದರ ಬಗ್ಗೆ 10 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಆರು ವಲಯಗಳಿಂದ ಒಬ್ಬೊಬ್ಬ ಪ್ರತಿನಿಧಿಯನ್ನು ನೇಮಕ ಮಾಡಲಾಗುವುದು. ಹಾಗೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಸೇರಿದಂತೆ ಬಿಸಿಸಿಐನ ನಾಲ್ವರು ಪದಾಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ.