ಜನವರಿ 1ರಿಂದ ರಣಜಿ ಟೂರ್ನಿ ಆರಂಭ ?
ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಪಂದ್ಯಗಳು ಈ ವರ್ಷ ನಡೆಯುವುದು ಅನುಮಾನವಾಗಿದೆ.
ಭಾರತದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಋತುವಿನ ಟೂರ್ನಿಯನ್ನು ಮುಂದಿನ ವರ್ಷದ ಆರಂಭದಿಂದ ಆರಂಭಿಸಲಾಗುವುದು.
ಹೌದು, ಜನವರಿ 1ರಿಂದ ರಣಜಿ ಟೂರ್ನಿ ಆರಂಭವಾಗಲಿದೆ. ಕೋವಿಡ್ ಮಾರ್ಗಸೂಚಿ ಮತ್ತು ಜೈವಿಕ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಆಯೋಜನೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಭಾನುವಾರ ನಡೆದ ಬಿಸಿಸಿಐ ಅಪೆಕ್ಸ್ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅಪೆಕ್ಸ್ ಕಮಿಟಿ ಸಭೆಯಲ್ಲಿ ಭಾರತದಲ್ಲಿ ದೇಸಿ ಟೂರ್ನಿಗಳನ್ನು ಆಯೋಜನೆ ಮಾಡುವುದರ ಬಗ್ಗೆ ಸುದೀರ್ಘ ಚರ್ಚೆಯನ್ನು ನಡೆಸಲಾಗಿದೆ.
ಹೀಗಾಗಿ ಜನವರಿ 1ರಿಂದ ಶುರು ಮಾಡುವ ಬಗ್ಗೆ ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಜನವರಿಯಿಂದ ಮಾರ್ಚ್ ನೊಳಗೆ ಈ ಋತುವಿನ ರಣಜಿ ಪಂದ್ಯಗಳನ್ನು ಆಡಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಕೋವಿಡ್ 19 ಮಾರ್ಗಸೂಚಿಗಳು ಇರುವುದರಿಂದ ಎಲ್ಲಾ ತಾಣಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲು ಸಾಧ್ಯವಿಲ್ಲ.
ಹೀಗಾಗಿ ಎಬಿಸಿ ಮತ್ತು ಪ್ಲೇಟ್ ಹೀಗೆ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ.
ಪ್ಲೇಟ್ ಗುಂಪಿನ ಪಂದ್ಯಗಳನ್ನು ಪುದುಚೇರಿಯಲ್ಲಿ ನಡೆಸಲಾಗುವುದು. ಪುದುಚೇರಿಯಲ್ಲಿ ಆರು ಮೈದಾನಗಳಿವೆ.
ಇನ್ನುಳಿದ ಟೂರ್ನಿಗಳನ್ನು ಮೂರು ಸೇಂಟರ್ ಗಳಲ್ಲಿ ಆಯೋಜನೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಬೆಂಗಳೂರಿನಲ್ಲೂ ಸಾಕಷ್ಟು ಮೈದಾನಗಳಿವೆ. ಹೀಗಾಗಿ ಬೆಂಗಳೂರಿನಲ್ಲೂ ಪಂದ್ಯಗಳನ್ನು ಆಯೋಜನೆ ಮಾಡುವ ಅವಕಾಶಗಳಿವೆ.
ಹಾಗೇ ಧರ್ಮಶಾಲಾದಲ್ಲೂ ಪಂದ್ಯಗಳನ್ನು ಆಯೋಜನೆ ಮಾಡಲಾಗುವುದು. ಈಗಾಗಲೇ ಜಾರ್ಖಂಡ್ ತಂಡ ಅಭ್ಯಾಸದಲ್ಲಿ ನಿರತವಾಗಿದೆ.
ಇದೇ ವೇಳೆ ಜೂನಿಯರ್ ಮತ್ತು ಮಹಿಳಾ ಕ್ರಿಕೆಟ್ ಟೂರ್ನಿಗಳನ್ನು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಆಯೋಜನೆ ಮಾಡುವ ಬಗ್ಗೆ ಗಂಗೂಲಿ ಸುಳಿವು ನೀಡಿದ್ದಾರೆ.