ಕೋವಿಡ್ ಟೆಸ್ಟ್ ನಲ್ಲಿ ಸೌರವ್ ಗಂಗೂಲಿಗೆ ನೆಗೆಟಿವ್
ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಯವರು ಸ್ವಯಂ ಪ್ರೇರಿತವಾಗಿ ಕೋವಿಡ್-19 ಟೆಸ್ಟ್ಗೆ ಒಳಪಟ್ಟಿದ್ದರು. ಇದೀಗ ಕೊವಿಡ್ ಪರೀಕ್ಷೆಯ ವರದಿ ಬಂದಿದ್ದು, ನೆಗೆಟಿವ್ ಎಂದು ತಿಳಿದುಬಂದಿದೆ.
ಸೌರವ್ ಗಂಗೂಲಿಯವರು ಕಳೆದ ಒಂದು ವಾರದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದರು. ಇದೀಗ ಸ್ವತಃ ಗಂಗೂಲಿ ಮುಂಜಾಗ್ರತ ಕ್ರಮವಾಗಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಗಂಗೂಲಿ ತನ್ನ ತಾಯಿ ಹಾಗೂ ಕುಟುಂಬದ ಜೊತೆಗಿದ್ದರು. ಹೀಗಾಗಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದರು.
ಗಂಗೂಲಿಯವರ ಅಣ್ಣ ಸ್ನೇಹಾಶೀಸ್ ಗಂಗೂಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸ್ನೇಹಾಶಿಸ್ ಗಂಗೂಲಿ ಚೇತರಿಸಿಕೊಂಡಿದ್ದು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಸ್ನೇಹಾಶಿಶ್ ಅವರ ಪತ್ನಿ, ಮಾವ ಹಾಗೂ ಅತ್ತೆ ಕೂಡ ಕೊವಿಡ್ ಸೊಂಕಿಗೆ ಒಳಪಟ್ಟಿದ್ದರು. ಸ್ನೇಹಾಶಿಶ್ ಅವರು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ಸ್ನೇಹಾಶಿಶ್ ಅವರು ತನ್ನ ಕಚೇರಿಯ ಕೆಲಸಗಳನ್ನು ಆಸ್ಪತ್ರೆಯಿಂದಲೇ ಮಾಡುತ್ತಿದ್ದಾರೆ.