ನಾನು ಯಾವತ್ತಿಗೂ ಆಟಗಾರರ ಪರವಾಗಿರುತ್ತೇನೆ – ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಎಂಟು ತಿಂಗಳು ಆಗಿವೆ. ಈ ಎಂಟು ತಿಂಗಳು ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಮುಂದೆನೂ ಸಾಕಷ್ಟು ಸವಾಲಗಳಿವೆ. ಒಂದಂತೂ ಸತ್ಯ, ಬಿಸಿಸಿಐ ಅಧ್ಯಕ್ಷಗಾದಿ ಅದು ಎಂದಿಗೂ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಕುರ್ಚಿ. ಇದೀಗ ಕೊರೋನಾ ವೈರಸ್‍ನಿಂದಾಗಿ ಐಪಿಎಲ್ ಭವಿಷ್ಯ ತೂಗೂಯ್ಯಾಲೆಯಲ್ಲಿದೆ. ಹೀಗಾಗಿ ಬಿಸಿಸಿಐ ಸುಮಾರು 4000 ಕೋಟಿ ರೂಪಾಯಿ ನಷ್ಟವನ್ನು ಎದುರಿಸುವ ಭೀತಿಯಲ್ಲೂ ಇದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ. ತಾನು ಬಿಸಿಸಿಐ ಅಧ್ಯಕ್ಷನಾಗಿದ್ದು ಹೇಗೆ ? ಕ್ರಿಕೆಟ್ ಅಭಿವೃದ್ದಿಗೆ ಹೇಗೆ ಬದ್ಧನಾಗಿರುತ್ತೇನೆ, ಮುಂದಿನ ಐಸಿಸಿ ಮುಖ್ಯಸ್ಥನ ಹುದ್ದೆಯ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾನು ಬಿಸಿಸಿಐ ಅಧ್ಯಕ್ಷನಾಗಲು ಬಯಸಿರಲಿಲ್ಲ, ಅದು ಅದೃಷ್ಟದಿಂದ ಬಂದಿದೆ. ಆಟಗಾರರ ಜೊತೆ ಕೆಲಸ ಮಾಡಲು ನನಗೆ ಸಿಕ್ಕಿರುವ ಇನ್ನೊಂದು ಅವಕಾಶ. ಈ ಸ್ಥಾನದಲ್ಲಿದ್ದುಕೊಂಡು ಕ್ರಿಕೆಟ್ ಆಟವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಅಂತ ಹೇಳ್ತಾರೆ ಸೌರವ್ ಗಂಗೂಲಿ.
ಇನ್ನು ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಏರುವಾಗ ಸಂದರ್ಭದಲ್ಲಿ ಒಂದು ಮಾತು ಕೊಟ್ಟಿದ್ದರು. ಅದು ಏನು ಅಂದ್ರೆ ದೇಸಿ ಕ್ರಿಕೆಟ್‍ನ ಗುಣಮಟ್ಟವನ್ನು ಹೆಚ್ಚಿಸುವುದು. ಹಾಗೂ ದೇಸಿ ಕ್ರಿಕೆಟಿಗರಿಗೆ ಸಂಭಾವಣೆಯನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಆದ್ರೆ ಅದು ಇಲ್ಲಿಯ ತನಕ ಸಾಧ್ಯವಾಗಿಲ್ಲ. ಆದ್ರೆ ಗಂಗೂಲಿ ತಾನು ಕೊಟ್ಟಿರುವ ಮಾತಿಗೆ ಬದ್ಧನಾಗಿದ್ದಾರೆ.
ನಾನು ಯಾವತ್ತಿಗೂ ಕ್ರಿಕೆಟ್ ಆಟಗಾರರ ಪರವಾಗಿದ್ದೇನೆ. ನನಗೆ ಅವರ ಭಾವನೆಗಳು ಗೊತ್ತು. ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಐಸಿಸಿ ಮುಖ್ಯಸ್ಥನ ಹುದ್ದೆಯ ಮೇಲೆ ತನ್ನ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಸೌರವ್ ಗಂಗೂಲಿ ಹೆಚ್ಚಿನ ಮಾಹಿತಿ ನೀಡಲಿಲ್ಲ. ನನ್ನ ಜವಾಬ್ದಾರಿ ಏನು ಎಂಬುದು ಗೊತ್ತಿದೆ. ಏನೇ ಜವಾಬ್ದಾರಿ ಬಂದ್ರೂ ಅದನ್ನು ನಿಭಾಯಿಸುತ್ತೇನೆ ಅಂತ ಹೇಳಿದ್ದಾರೆ.
ಹಾಗೇ ಭಾರತೀಯ ಕ್ರಿಕೆಟ್ ಯಾವತ್ತಿಗೂ ಪ್ರವರ್ಧಮಾನದಲ್ಲಿರುತ್ತದೆ. ಗವಾಸ್ಕರ್ ಯುಗ ಮುಗಿದ ನಂತರ ಸಚಿನ್, ದ್ರಾವಿಡ್ ಪ್ರವರ್ಧಮಾನಕ್ಕೆ ಬಂದ್ರು. ಈಗ ಕೊಹ್ಲಿ ಪ್ರಜ್ವಲಿಸುತ್ತಿದ್ದಾರೆ. ಭಾರತದಲ್ಲಿ ಎಂದೆಂದಿಗೂ ಚಾಂಪಿಯನ್ ಆಟಗಾರರು ರೂಪುಗೊಳ್ಳುತ್ತಾರೆ. ಬ್ರೇಜಿಲ್‍ನಲ್ಲಿ ಫುಟ್‍ಬಾಲ್ ಹೇಗಿದೆಯೋ ಅದೇ ರೀತಿ ಭಾರತದಲ್ಲಿ ಪ್ರತಿಭಾವಂತ ಆಟಗಾರರು ಬರುತ್ತಿದ್ದಾರೆ. ನಮ್ಮಲ್ಲಿ ವಿಶ್ವ ಶ್ರೇಷ್ಠ ಆಟಗಾರರನ್ನು ತಯಾರು ಮಾಡುವಂತಹ ಅವಕಾಶ, ವೇದಿಕೆ ಇದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.








