ರಿಷಬ್ ಪಂತ್ ಬೆಂಬಲಕ್ಕೆ ನಿಂತ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ..!
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಕೋವಿಡ್ ಸೋಂಕಿನಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಟೀಮ್ ಇಂಡಿಯಾಗೆ ಆಘಾತದ ಮೇಲೆ ಆಘಾತವಾಗಿದೆ. ಆರಂಭದಲ್ಲಿ ಶುಬ್ಮನ್ ಗಿಲ್ ಗಾಯಗೊಂಡು ಟೂರ್ನಿಯಿಂದ ಹೊರನಡೆದಿದ್ದರು. ಇದೀಗ ರಿಷಬ್ ಪಂತ್ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೋ ಇಲ್ಲವೋ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಇನ್ನೊಂದೆಡೆ ರಿಷಬ್ ಪಂತ್ ಅವರಿಗೆ ಬೇಜವಾಬ್ದಾರಿಯಿಂದಲೇ ಕೋವಿಡ್ ಸೋಂಕು ತಗುಲಿರುವುದು ಎಂಬ ಮಾತುಗಳು ಕೇಳಿಬರುತ್ತಿವೆ. ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ ನಂತರ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ನಲ್ಲಿದ್ದರು. ವಿರಾಮದ ವೇಳೆಯಲ್ಲಿ ಆಟಗಾರರು ಇಂಗ್ಲೆಂಡ್ ನಲ್ಲಿ ಸುತ್ತಾಟ ಕೂಡ ನಡೆಸಿದ್ದರು. ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಅವರು ವಿಂಬಲ್ಡನ್ ಅಂಗಣದಲ್ಲೂ ಕಾಣಿಸಿಕೊಂಡಿದ್ದರು.
ಮತ್ತೊಂದೆಡೆ ರಿಷಬ್ ಪಂತ್ ಯೂರೋ ಕಪ್ ಫುಟ್ ಬಾಲ್ ಟೂರ್ನಿಯನ್ನು ವೀಕ್ಷಣೆ ಮಾಡಿದ್ದರು. ಜೊತೆಗೆ ತಮ್ಮ ಅಭಿಮಾನಿಗಳ ಜೊತೆ ಫೋಟೋ ಶೂಟ್ ಕೂಡ ಮಾಡಿಕೊಂಡಿದ್ದರು. ಈ ವೇಳೆ ರಿಷಬ್ ಪಂತ್ ಮಾಸ್ಕ್ ಕೂಡ ಧರಿಸಿಲ್ಲ. ಹೀಗಾಗಿ ಪಂತ್ ಮೇಲೆ ಸಾಮಾಜಿಕ ಜಾಲ ತಾಣ ಹಾಗೂ ಕೆಲವು ಕ್ರಿಕೆಟ್ ಪಂಡಿತರೂ ವಾಗ್ದಾಳಿ ಕೂಡ ನಡೆಸಿದ್ದರು.
ಇದೀಗ ರಿಷಬ್ ಪಂತ್ ಬೆನ್ನಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಂತಿದ್ದಾರೆ. ರಿಷಬ್ ಪಂತ್ ಅವರನ್ನು ಸಮರ್ಥನೆ ಮಾಡಿಕೊಂಡಿರುವ ಸೌರವ್ ಗಂಗೂಲಿ, ಯಾವಾಗಲೂ ಮಾಸ್ಕ್ ಹಾಕೊಂಡು ತಿರುಗಾಡಲು ಸಾಧ್ಯವಿಲ್ಲ. ವಿಂಬಲ್ಡನ್ ಮತ್ತು ಯೂರೋ ಕಪ್ ಟೂರ್ನಿಯ ವೇಳೆ ಕೋವಿಡ್ ಮಾರ್ಗಸೂಚಿಯ ನಿಯಮಗಳಲ್ಲೂ ಬದಲಾವಣೆಯಾಗಿತ್ತು. ಪ್ರತಿ ಬಾರಿ ಮಾಸ್ಕ್ ಧರಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಬಿಗ್ ಬಾಸ್ ಹೇಳಿದ್ದಾರೆ.
ಇದೇ ವೇಳೆ ರಿಷಬ್ ಪಂತ್ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಫಿಟ್ ಆಗಿರುತ್ತಾರೆ ಎಂಬ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.
ರಿಷಬ್ ಪಂತ್ ಕೋವಿಡ್ ಸೋಂಕಿನ ಕೇಸ್ ನ ನಂತರ ಟೀಮ್ ಇಂಡಿಯಾಗೆ ಯಾವುದೇ ರೀತಿಯ ಆತಂಕವೂ ಇಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ರಿಷಬ್ ಪಂತ್ ಅವರನ್ನು ಹೊರತುಪಡಿಸಿ ಇನ್ನುಳಿದ ಟೀಮ್ ಇಂಡಿಯಾ ಆಟಗಾರರು ಜುಲೈ 20ರಿಂದ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಮೊದಲ ಟೆಸ್ಟ್ ಗೆ ಮುನ್ನ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಆಗಸ್ಟ್ 4ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.
ಇದೇ ವೇಳೆ ರಿಷಬ್ ಪಂತ್ ಅವರು ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಫಿಟ್ ಆಗಿರುತ್ತಾರೆ ಎಂಬ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.








