ಟೋಕಿಯೋ ಒಲಿಂಪಿಕ್ಸ್ – ಭಾರತದ ಕ್ರೀಡಾಪಟುಗಳಿಗೆ ಹತ್ತು ಕೋಟಿ ರೂಪಾಯಿ ದೇಣಿಗೆ ನೀಡಿದ ಬಿಸಿಸಿಐ
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ವಿಶ್ವ ಕ್ರಿಕೆಟ್ ನ ಕುಬೇರ ಬಿಸಿಸಿಐ ಆರ್ಥಿಕ ಸಹಾಯ ನೀಡಲು ಮುಂದಾಗಿದೆ.
ಬಿಸಿಸಿಐ ವಿಶೇಷ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾರತೀಯ ಕ್ರೀಡಾಪಟುಗಳಿಗೆ 10 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನು ನೀಡುವ ತೀರ್ಮಾನ ತೆಗೆದುಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತದ ಕ್ರೀಡಾಪಟುಗಳ ಸಿದ್ಧತೆ ಮತ್ತು ಪ್ರಚಾರ ಕಾರ್ಯಕ್ಕೆ ಈ ಹತ್ತು ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ಕ್ರೀಡಾಪಟುಗಳ ಸಿದ್ಧತೆಗಾಗಿ 2.5 ಕೋಟಿ ರೂಪಾಯಿ ಮತ್ತು ಇನ್ನುಳಿದ 7.5 ಕೋಟಿ ರೂಪಾಯಿ ಪ್ರಚಾರಕ್ಕಾಗಿ ಬಳಕೆ ಮಾಡಲಾಗುವುದು.
ಬಿಸಿಸಿಐ ಈ ದೇಣಿಗೆಯನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ನೀಡಲಿದೆ. ಆರ್ಥಿಕವಾಗಿ ಭಾರತದಲ್ಲಿ ಬಿಸಿಸಿಐ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿದೆ. ಇನ್ನುಳಿದಂತೆ ಭಾರತ ಕ್ರೀಡಾ ಸಂಸ್ಥೆಗಳು ಆರ್ಥಿಕ ಸಹಾಯಕ್ಕಾಗಿ ಸರ್ಕಾರವನ್ನೇ ನೆಚ್ಚಿಕೊಳ್ಳಬೇಕಿದೆ. ಸದ್ಯ ಭಾರತೀಯ ಒಲಿಂಪಿಕ್ ಸಂಸ್ಥೆಗೆ ನಾಲ್ಕು ಕಂಪೆನಿಗಳು ಪ್ರಾಯೋಜಕತ್ವವನ್ನು ನೀಡಿವೆ. ಎಮ್ ಪಿಎಲ್ ಫೌಂಡೇಷನ್, ಐನೊಕ್ಸ್ ಗ್ರೂಪ್, ನಿಪ್ಪೋನ್ ಪೇಂಟ್ಸ್, ಎಡೆಲ್ ವೆಸಿಸ್ ಕಂಪೆನಿಗಳು ಪ್ರಾಯೋಜಕತ್ವ ನೀಡಿವೆ. ಈ ನಡುವೆ ಭಾರತದ ಒಲಿಂಪಿಕ್ ಕ್ರೀಡಾಪಟುಗಳು ಕಿಟ್ ಪ್ರಾಯೋಜಕರಾಗಿ ಚೀನಾ ಮೂಲದ ಲಿ ನಿಂಗ್ ಕಂಪೆನಿಯೂ ಮುಂದೆ ಬಂದಿದೆ.
ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ. ಜಪಾನ್ ಆತಿಥ್ಯದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಂತಿಮ ಹಂತದ ತಯಾರಿ ಕೂಡ ನಡೆಯುತ್ತಿದೆ.








