BCCI Vs PCB – ದೊಡ್ಡಣ ಬಿಸಿಸಿಐಗೆ ತಲೆಬಾಗಿದ ಪಾಕ್ ಕ್ರಿಕೆಟ್ ಮಂಡಳಿ..!
ಟೀಮ್ ಇಂಡಿಯಾ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಆಡಲ್ಲ. ಭಾರತೀಯ ಕ್ರಿಕೆಟ್ ಆಟಗಾರರು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡುವಂತಿಲ್ಲ. ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಟ್ಟಪ್ಪಣೆ.
ಹೌದು, ಬಿಸಿಸಿಐ ಯಾರ ಮಾತಿಗೂ ಮಣೆ ಹಾಕಲ್ಲ. ಐಸಿಸಿಗೂ ಡೋಂಟ್ ಕೇರ್ ಎನ್ನುತ್ತಿರೋ ಬಿಸಿಸಿಐ, ವಿಶ್ವ ಕ್ರಿಕೆಟ್‍ನ ದೊಡ್ಡಣ್ಣ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಾರಣ ಬಿಸಿಸಿಐನ ಮನಿ ಪವರ್ ಮತ್ತು ಟೀಮ್ ಇಂಡಿಯಾ ಆಟಗಾರರ ಜನಪ್ರಿಯತೆ.
ವಿಶ್ವ ಕ್ರಿಕೆಟ್ ಅನ್ನು ಕೈ ಬೆರಳಿನಲ್ಲಿ ಆಡಿಸುತ್ತಿರೋ ಬಿಸಿಸಿಐ ಬೆಳೆದು ಬಂದ ರೀತಿಯೇ ರೋಚಕ. ಅಂದ ಹಾಗೇ ಬಿಸಿಸಿಐನ ಬೊಕ್ಕಸಕ್ಕೆ ನೀರಿನಂತೆ ದುಡ್ಡು ಹರಿದು ಬರುವಂತೆ ಮಾಡಿದ್ದು ದಿ. ಜಗಮೋಹನ್ ದಾಲ್ಮಿಯ ಅವರ ದೂರದೃಷ್ಟಿ. ಹಾಗೇ ಪ್ರೇಕ್ಷಕರನ್ನು ಆಕರ್ಷಿಸುವಂತೆ ಮಾಡಿದ್ದು ಸಚಿನ್ ತೆಂಡುಲ್ಕರ್ ಅವರ ಮನಮೋಹಕ ಆಟ.
ಪ್ರತಿ ಕ್ಷಣ, ಪ್ರತಿ ರನ್, ಪ್ರತಿ ಬೌಂಡರಿ, ಪ್ರತಿ ಸಿಕ್ಸರ್, ಪ್ರತಿ ವಿಕೆಟ್, ಪ್ರತಿ ಓವರ್‍ನಲ್ಲೂ ಲಕ್ಷಾಂತರ ರೂಪಾಯಿಯ ಜಾಹಿರಾತು. ಜೊತೆಗೆ ಟಿವಿ ನೇರ ಪ್ರಸಾರ ಹಕ್ಕು, ಈಗ ಡಿಜಿಟಲ್ ಹಕ್ಕು ಹೀಗೆ ವಿಶ್ವ ಕ್ರಿಕೆಟ್ ಅನ್ನು ದೊಡ್ಡ ಉದ್ಯಮವಾಗಿ ಬೆಳೆಸಿದ್ದು ಬಿಸಿಸಿಐ. ಆ ಕಾರಣಕ್ಕಾಗಿಯೇ ಇಂದು ಐಸಿಸಿಯಾಗಲಿ, ಬೇರೆ ಯಾವುದೇ ಕ್ರಿಕೆಟ್ ಮಂಡಳಿಯೇ ಆಗಿರಲಿ, ಬಿಸಿಸಿಐ ಅನ್ನು ಎದುರುಹಾಕೋ ದುಸ್ಸಾಹಸಕ್ಕೆ ಕೈಹಾಕಲ್ಲ. ಈ ಎಲ್ಲಾ ಕಾರಣದಿಂದಾಗಿಯೇ ವಿಶ್ವ ಕ್ರಿಕೆಟ್‍ನಲ್ಲಿ ಬಿಸಿಸಿಐ ಅಷ್ಟೊಂದು ಪವರ್‍ಫುಲ್.
ಅಂದ ಹಾಗೇ ಈ ಎಲ್ಲಾ ವಿಚಾರಗಳು ಗೊತ್ತಿದ್ರೂ ಬಿಸಿಸಿಐ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ ಬೊಬ್ಬೆ ಹೊಡೆಯುತ್ತಿದೆ. ಬಿಸಿಸಿಐ ಎದುರು ಸದಾ ಕಿರಿಕ್ ಮಾಡ್ತಿರೋ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ಕಂಪ್ಲೇಟ್ ಕೊಟ್ರೂ ಪ್ರಯೋಜನವೇನು ಆಗುತ್ತಿಲ್ಲ. ಕೇಂದ್ರ ಸರ್ಕಾರದ ಅಣತಿಯಂತೆ ಬಿಸಿಸಿಐ ಪಾಕ್ ನೆಲದಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದಕ್ಕೆ ರಾeತಾಂತ್ರಿಕ ಕಾರಣ ಮೇಲ್ನೋಟಕ್ಕೆ ಕಂಡು ಬಂದ್ರೂ ವಾಸ್ತವ ಬೇರೆನೇ ಇದೆ.
ನಿಜ, ವಿಶ್ವ ಕ್ರಿಕೆಟ್‍ನಲ್ಲಿ ಇಂಡೋ -ಪಾಕ್ ಕದನವನ್ನು ಬದ್ಧವೈರಿಗಳ ಕದನ ಅಂತಲೇ ಬಣ್ಣಿಸಲಾಗುತ್ತಿದೆ. ಇಲ್ಲಿ ಸೋಲು- ಗೆಲುವಿಗಿಂತ ಪ್ರತಿಷ್ಠೆಯೇ ಮುಖ್ಯವಾಗಿರುತ್ತೆ. ಜೊತೆ ಹರಿದಾಡುತ್ತಿರೋ ದುಡ್ಡು ಮತ್ತು ಬೆಟ್ಟಿಂಗ್ ಪ್ರಪಂಚ. ಕಾಣದ ಕೈಗಳ ಕೈವಾಡ. ಹೀಗಾಗಿ ಭಾರತ ಪಾಕ್ ನೆಲದಲ್ಲಿ ಆಡುವುದಕ್ಕೆ ಮನಸ್ಸು ಮಾಡ್ತಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡ್ತಿರೋ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಸಂಬಂಧವೇ ಬೇಡ ಎಂಬುದು ಕೂಡ ಕೇಂದ್ರ ಸರ್ಕಾರದ ಬದ್ಧ ನಿಲುವು ಆಗಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯವೂ ಇಲ್ಲ.
ಇದೀಗ ಏಷ್ಯಾಕಪ್ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖಭಂಗ ಅನುಭವಿಸಿದೆ. ಈ ಮೊದಲು ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದ್ರೆ ಬಿಸಿಸಿಐ ಪಾಕ್ ನೆಲದಲ್ಲಿ ಆಡಲ್ಲ ಎಂದು ಆಕ್ಷೇಪ ಮಾಡಿತ್ತು. ಈ ವಿಚಾರವಾಗಿ ಪಿಸಿಬಿ ಐಸಿಸಿಗೂ ಕಂಪ್ಲೆಂಟ್ ಮಾಡಿತ್ತು. ಆದ್ರೆ ಏನು ಪ್ರಯೋಜನವಾಗಿಲ್ಲ. ಕೊನೆಗೆ ಪಾಕಿಸ್ತಾನ ಏಕದಿನ ವಿಶ್ವಕಪ್‍ನಲ್ಲಿ ಭಾರತದಲ್ಲಿ ಆಡಲ್ಲ ಎಂದು ಬ್ಲ್ಯಾಕ್‍ಮೇಲ್ ಮಾಡಿತ್ತು. ಆದ್ರೆ ಪಿಸಿಬಿಯ ಬೆದರಿಕೆಗಳಿಗೆ ಸೊಪ್ಪು ಹಾಕದ ಬಿಸಿಸಿಐ ಏಷ್ಯಾಕಪ್ ಟೂರ್ನಿಯನ್ನೇ ಶಿಫ್ಟ್ ಮಾಡುವಂತೆ ಮಾಡಿತ್ತು.
ಇದೀಗ ಪಿಸಿಬಿಗೂ ಮನವರಿಕೆಯಾಗಿದೆ. ಬಿಸಿಸಿಐ ಜೊತೆಗೆ ಕಿರಿಕ್ ಮಾಡಿಕೊಂಡ್ರೆ ಪಾಕ್ ಕ್ರಿಕೆಟ್ ಮಂಡಳಿ ದಿವಾಲಿಯಾಗುತ್ತೆ ಎಂಬುದು ಗೊತ್ತಾಗಿದೆ. ಹೀಗಾಗಿಯೇ ಇದೀಗ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‍ನಲ್ಲಿ ಆಡುವುದಾಗಿ ತಿಳಿಸಿದೆ. ಅಷ್ಟರ ಮಟ್ಟಿಗೆ ಬಿಸಿಸಿಐ ಪಾಕ್ ಕ್ರಿಕೆಟ್ ಮಂಡಳಿಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವಂತೆ ಮಾಡಿದೆ. ಇದು ನಮ್ಮ ಭಾರತದ ಪವರ್. ಇದು ನವಭಾರತದ ಹೆಮ್ಮೆ.
ಆದ್ರೆ ಈಗ ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಜವಾಬ್ದಾರಿ ಇದೆ. ಪಾಕ್ ವಿರುದ್ಧ ಸೋಲಬಾರದು. ಸೋತು ತಲೆಬಾಗಬಾರದು. ಏಕದಿನ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ಇಲ್ಲಿಯವರೆಗೆ ಸೋತಿಲ್ಲ. ಕಳೆದ ಟಿ-20 ವಿಶ್ವಕಪ್‍ನಲ್ಲಿ ಸೋತಿರೋ ಟೀಮ್ ಇಂಡಿಯಾ, ಏಕದಿನ ವಿಶ್ವಕಪ್‍ನ ಪರಂಪರೆಯನ್ನು ಉಳಿಸಿಕೊಳ್ಳಬೇಕಾದ ಮಹತ್ತರವಾದ ಹೊಣೆಗಾರಿಕೆ ರೋಹಿತ್ ಶರ್ಮಾ ಬಳಗಕ್ಕಿದೆ.








