ಮಹಿಳಾ ಏಕದಿನ ಪಂದ್ಯ – ಭಾರತದ ವಿರುದ್ಧ ಇಂಗ್ಲೆಂಡ್ ಗೆ ಎಂಟು ವಿಕೆಟ್ ಗಳ ಜಯ
ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದೆ.
ಬ್ರಿಸ್ಟೋಲ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಎಂಟು ವಿಕೆಟ್ ಗಳಿಂದ ಭಾರತ ಮಹಿಳಾ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ ಎರಡು ವಿಕೆಟ್ ಕಳೆದುಕೊಂಡು 34.5 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿಯರಾದ ಸ್ಮøತಿ ಮಂದಾನ 10 ರನ್ ಗೆ ಸೀಮಿತವಾದ್ರೆ, ಶಫಾಲಿ ವರ್ಮಾ ಅವರ ಹೋರಾಟ 15 ರನ್ ಗೆ ಕೊನೆಗೊಂಡಿತ್ತು. ಇನ್ನು ಪೂನಮ್ ರೌತ್ 32 ರನ್ ಗಳಿಸಿದ್ರೆ, ನಾಯಕಿ ಮಿಥಾಲಿ ರಾಜ್ ಆಕರ್ಷಕ 72 ರನ್ ಸಿಡಿಸಿದ್ರು. ಉಪನಾಯಕ ಹರ್ಮನ್ ಪ್ರೀತ್ ಕೌರ್ ಒಂದು ರನ್ ಗಳಿಸಿದ್ರು. ದೀಪ್ತಿ ಶರ್ಮಾ 30 ರನ್ ದಾಖಲಿಸಿದ್ರೆ, ಪೂಜಾ ವಾಸ್ತ್ರಕರ್ 15 ರನ್ ಹಾಗೂ ತನಿಯಾ ಭಾಟಿಯ 7 ರನ್ ಗಳಿಸಿದ್ರು. ಇಂಗ್ಲೆಂಡ್ ಪರ ಕ್ಯಾಥರಿನ್ ಬ್ರಂಟ್ ಮತ್ತು ಆನ್ಯಾ ಶ್ರುಬ್ಸೊಲೆ ತಲಾ ಎರಡು ವಿಕೆಟ್ ಕಬಳಿಸಿದ್ರೆ, ಸೋಫಿಯಾ ಎಲೆಸ್ಟೋನ್ ಮೂರು ವಿಕೆಟ್ ಪಡೆದ್ರು.
ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ ಆರಂಭದಲ್ಲೇ ಲಾರೇನ್ ವಿನ್ ಫೆಲ್ಡ್ ಹಿಲ್ (15 ರನ್) ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ಹಾಗೇ ನಾಯಕಿ ಹಿಥರ್ ನೈಟ್ 18 ರನ್ ಗೆ ಸುಸ್ತಾದ್ರು. ಆದ್ರೆ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮೌಂಟ್ ಅಜೇಯ 87 ರನ್ ಹಾಗೂ ನಥಾಲಿ ಸ್ಕಿವರ್ ಅಜೇಯ 74 ರನ್ ಗಳೊಂದಿಗೆ ಮೂರನೇ ವಿಕೆಟ್ ಗೆ 119 ರನ್ ಕಲೆ ಹಾಕಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗ ಇಂಗ್ಲೆಂಡ್ 1-0 ಯಿಂದ ಮುನ್ನಡೆ ಪಡೆದಿದೆ. ಇದಕ್ಕು ಮೊದಲು ನಡೆದ ಏಕೈಕ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.








