ಆದಷ್ಟು ಬೇಗ ಡಿಸಿಎಂ ಸಿಎಂ ಆಗಲಿ : ಸದಾನಂದಗೌಡ ( Sadananda Gowda ) ಹೇಳಿಕೆ ಮರ್ಮವೇನು..?
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಜಗತ್ ಜಾಹೀರಾಗಿರುವ ವಿಚಾರವೇ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿಎಂ ಬಿಎಸ್ ವೈ ಮತ್ತು ಪಕ್ಷದ ವಿರುದ್ಧ ಕೆಲ ಶಾಸಕರು ಬಹಿರಂಗವಾಗಿಯೇ ಹೇಳಿಕೆಗಳನ್ನ ಕೊಡುತ್ತಿರೋದು ನಾವು ನೋಡುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಸಿಎಂ ಬದಲಾವಣೆ ವಿಚಾರವಂತೂ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಲೇ ಇದೆ. ಈ ಮಧ್ಯೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ( Sadananda Gowda ) ಅವರ ಹೇಳಿಕೆಯೊಂದು ಕೆಲ ಅನುಮಾನಗಳಿಗೆ ಕಾರಣವಾಗಿದೆ.
ಸದಾನಂದ ಗೌಡ ಹೇಳಿದ್ದೇನು..?
ಬೆಂಗಳೂರಿನ ಮಲ್ಲೇಶ್ವರದಲ್ಲಿ ಗುರುವಾರ ರಾತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಷನ್ ಆಯೋಜಿಸಿದ್ದ ಮಹಾ ಶಿವರಾತ್ರಿ ಉತ್ಸವದಲ್ಲಿ ಸದಾನಂದಗೌಡರು ( Sadananda Gowda ) ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಅತ್ಯುತ್ತಮ ಕರ್ತವ್ಯ ಪ್ರಜ್ಞೆ ಹಾಗೂ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣರ ಪದವಿ ಮುಂದಿರುವ ‘ಉಪ’ ಹೋಗಿ ಆದಷ್ಟು ಬೇಗ ‘ಮುಖ್ಯಮಂತ್ರಿ’ ಎಂಬ ಪದನಾಮ ಬರುವಂತಾಗಲಿ.
ನಮ್ಮ ಮಧ್ಯೆ ರಾಜಕಾರಣಿಗಳಲ್ಲಿ ಮಾತನಾಡುವವರೇ ಜಾಸ್ತಿ. ಇದಕ್ಕೆ ಅಶ್ವತ್ಥನಾರಾಯಣ ಅವರು ಅಪವಾದ. ಅವರದ್ದು ಕನಿಷ್ಠ ಮಾತು , ಗರಿಷ್ಠ ಕೆಲಸ ಎನ್ನುವ ನೀತಿ. ಈ ಪರಿಶ್ರಮವೇ ಅವರನ್ನು ಮುಂದೊಂದು ದಿನ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಈ ಹೇಳಿಕೆ ಇದೀಗ ರಾಜ್ಯ ರಾಜಕೀಯವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಯಾಕೆಂದ್ರೆ ಈ ಹಿಂದೆ ಸಿಎಂ ಬದಲಾವಣೆ ವಿಚಾರ ಬಲವಾಗಿ ಕೇಳಿಬಂದಾಗ ಅಶ್ವಥ್ ನಾರಾಯಣ್ ಹೆಸರು ಕೇಳಿಬಂದಿತ್ತು. ಅವರೇ ಮುಂದಿನ ಸಿಎಂ ಆಗ್ತಾರೆ ಅಂತ ಕೂಡ ಹೇಳಲಾಗುತ್ತಿತ್ತು. ಇದೀಗ ಡಿವಿಎಸ್ ಅಶ್ವಥ್ ನಾರಾಯಣ್ ಅವರು ಸಿಎಂ ಆಗಲಿ ಅಂತ ಹೇಳಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.