ಬೆಂಗಳೂರು: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಉಸ್ತುವಾರಿ ಸಚಿವರ ನೇಮಕ ವಿಷಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ನನಗೆ ಕೊಡುವುದು ಬೇಡ, ಸದ್ಯಕ್ಕೆ ಜಗದೀಶ ಶೆಟ್ಟರ್ ಅವರೇ ಮುಂದುವರಿಯಲಿ ಎಂದು ನಾನೇ ಮುಖ್ಯಮಂತ್ರಿ ಬಳಿ ವಿನಂತಿಸಿದ್ದೆ. ಹೀಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ’. ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವುದರಿಂದ ಜವಾಬ್ದಾರಿಯೂ ದೊಡ್ಡದಿರುತ್ತದೆ, ದೊಡ್ಡದಾದ ಜಲಸಂಪನ್ಮೂಲ ಖಾತೆ ನಿಭಾಯಿಸುವ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ನಿಭಾಯಿಸುವುದು ಸಾಧ್ಯವಿಲ್ಲ. ಹೀಗಾಗಿ, ಉಸ್ತುವಾರಿ ಬೇಡ ಎಂದು ನಾನೇ ತಿಳಿಸಿದ್ದೇನೆ. ಶೆಟ್ಟರ್ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೇರೆ ಅಲ್ಲ, ನಾನು ಬೇರೆ ಅಲ್ಲ’ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ಮೊದಲ ಬಾರಿಗೆ ಬೇರೆ ಜಿಲ್ಲೆಯ ಸಚಿವರೊಬ್ಬರಿಗೆ ಕೊಡಲು ಮುಖ್ಯಮಂತ್ರಿ ಮುಂದಾಗಿದ್ದರು. ಆದರೆ ಶೆಟ್ಟರ್ ಅವರಿಗೆ ಕೊಡುವಂತೆ ನಾನೇ ವಿನಂತಿಸಿದ್ದೆ. ನನ್ನ ಮನವಿಯಂತೆ ಶೆಟ್ಟರ್‌ಗೆ ನೀಡಲಾಗಿದೆ. ಅವರೇ ಮುಂದುವರಿಯಲಿ ಎಂದೂ ಹೇಳಿದ್ದೆ. ಹಾಗಾಗಿ ಈಗಲೂ ಬದಲಾಯಿಸಲಿಲ್ಲ. ಅವರಾದರೆ ನಾನೇ ಆದಂತೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಮುಂದಿನ ಚುನಾವಣೆಯ ವರ್ಷ ನಾನೇ ಉಸ್ತುವಾರಿಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈ ವಿಷಯದಲ್ಲಿ ದಯವಿಟ್ಟು ಯಾರೂ ಗೊಂದಲಕ್ಕೆ ಒಳಗಾಗಬಾರದು’ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








