ಬೈ ಎಲೆಕ್ಷನ್ ರಿಸಲ್ಟ್ : ಬೆಳಗಾವಿ ಲೋಕ ಸಮರದಲ್ಲಿ ಗೆಲುವು ಯಾರಿಗೆ..?
ಬೆಂಗಳೂರು : ಇಂದು ಬೆಳಗಾವಿ ಲೋಕಸಭಾ, ಮಸ್ಕಿ ಹಾಗೂಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನ ನಡೆಸಿದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆಯಾ ಕ್ಷೇತ್ರದಲ್ಲಿ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ ನಡೆದಿತ್ತು.
ಮೂರು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದವು. ಅದರಲ್ಲೂ ಬೆಳಗಾವಿ ಈ ಬಾರಿ ಸಹೋದರರ ಸವಾಲಿಗೂ ಕಾರಣವಾಗಿತ್ತು. ಯಾಕೆಂದ್ರೆ ಸ್ವತಃ ಸತೀಶ್ ಜಾರಕಿಹೊಳಿ ಕಣದಲ್ಲಿದ್ದರೂ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಬಿಜೆಪಿಗೆ ಬಹಿರಂಗ ಬೆಂಬಲ ಸೂಚಿಸಿದ್ದರು.
ಈ ಹಿನ್ನೆಲೆ ಬೆಳಗಾವಿ ಬೈ ಎಲೆಕ್ಷನ್ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಾ ಬಂದಿದೆ. ಆದ್ರೆ ಈ ಬಾರಿ ಕಾಂಗ್ರೆಸ್ ಚರಿತ್ರೆ ಬರೆಯುವ ನಿಟ್ಟಿನಲ್ಲಿ ಪ್ರಚಾರ ನಡೆಸಿದೆ. ಇತ್ತ ಬಿಜೆಪಿಯಲ್ಲೂ ಕೂಡ ಘಟಾನುಘಟಿ ನಾಯಕರೇ ಇಲ್ಲಿ ಪ್ರಚಾರ ನಡೆಸಿದ್ದಾರೆ.
ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಂಗಳ ಸುರೇಶ್ ಅಂಗಡಿ, ಕಾಂಗ್ರೆಸ್ ನಿಂದ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಸೇರಿದಂತೆ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಯಾರಿಗೆ ವಿಜಯ ಸಿಗುತ್ತೋ ಕಾದುನೋಡಬೇಕು.