ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಸಂಘಟನೆಗಳು ಹಾಕಿರುವ ಕನ್ನಡ ಧ್ವಜ ವಿವಾದ ಕುಂದಾನಗರಿ ಬೆಳಗಾವಿಯನ್ನು ಅಕ್ಷರಶಃ ಅಗ್ನಿಕುಂಡವಾಗಿಸಿದೆ. ಯಾವ ಕ್ಷಣದಲ್ಲೂ ಏನಾಗುತ್ತೋ ಎಂಬ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ.

ಇದರ ಬೆನ್ನಲ್ಲೇ, ಬೆಳಗಾವಿ ನಗರದ ಹೃದಯ ಭಾಗ ರಾಣಿ ಚೆನ್ನಮ್ಮ ವೃತ್ತದ ಪ್ರತಿಮೆ ಬಳಿ ಹಾಕಿದ್ದ ಕನ್ನಡ ಧ್ವಜ ಕಂಬ ರಾತ್ರೋ ರಾತ್ರಿ ಮುರಿದು ಬಿದ್ದಿತ್ತು. ಇದು ಸಹಜವಾಗಿಯೇ ಕನ್ನಡ ಸಂಘಟನೆಗಳು ಹಾಗೂ ಎಂಇಎಸ್ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಎಂದೇ ಭಾವಿಸಲಾಗಿತ್ತು.
ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಕನ್ನಡ ಸಂಘಟನೆಗಳು ಹಾಗೂ ಎಂಇಎಸ್ ನಡುವೆ ಆಗಾಗ ಜಟಾಪಟಿಗಳು ನಡೆಯುತ್ತಲೇ ಇರುತ್ತವೆ. ಸೋಮವಾರವಷ್ಟೇ ಕನ್ನಡ ಸಂಘಟನೆಗಳು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ದಿಢೀರ್ ಕನ್ನಡ ಧ್ವಜ ಹಾರಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಧ್ವಜ ತೆರವು ಮಾಡುವಂತೆ ಎಂಇಎಸ್ ಜಿಲ್ಲಾಡಳಿತಕ್ಕೆ ಡಿ.31ರವರೆಗೆ ಗಡುವುದು ನೀಡಿದೆ. ಜಿಲ್ಲಾಧಿಕಾರಿಗಳು ಧ್ವಜ ತೆರವು ಮಾಡುವಂತೆ ಕನ್ನಡ ಸಂಘಟನೆಗಳ ಕಾರ್ಯಕರ್ತರ ನಡುವೆ ನಡೆಸಿದ ಸಂಧಾನ ಕೂಡ ವಿಫಲವಾಗಿದೆ.

ಹೀಗಾಗಿ ಚೆನ್ನಮ್ಮ ವೃತ್ತದ ಕನ್ನಡ ಧ್ವಜ ಕಂಬವನ್ನು ಎಂಇಎಸ್ ಕಡೆಯವರೇ ಮುರಿದು ಹಾಕಿರಬಹುದು ಎಂಬ ಅನುಮಾನ ಕನ್ನಡ ಸಂಘಟನೆಗಳಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ಬಳಿಕ ಪೊಲೀಸರು ಚೆನ್ನಮ್ಮ ವೃತ್ತದಲ್ಲಿ ಹಾಕಿದ್ದ ಸಿಸಿಟಿವಿಗಳು ಪರಿಶೀಲನೆ ನಡೆಸಿದ್ದಾರೆ. ಕಂಬದ ಬಳಿ ಕಟ್ಟಿದ್ದ ವೈರೊಂದು ರಾತ್ರಿ ವೇಳೆ ತೆರಳುತ್ತಿದ್ದ ಕಬ್ಬಿನ ಲಾರಿಗೆ ಸಿಲುಕಿದ್ದರಿಂದ ಕನ್ನಡ ಧ್ವಜ ಕಂಬ ಮುರಿದಿರುವುದು ದೃಢಪಟ್ಟಿದೆ. ಹೀಗಾಗಿ ಕನ್ನಡ ಸಂಘಟನೆಗಳ ಗೊಂದಲ ಬಗೆಹರಿದಿದ್ದು, ವಿವಾದ ಸುಖಾಂತ್ಯಗೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








