ಬೆಳಗಾವಿ | ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವ ಪತ್ತೆ
ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ಭಾರೀ ಮಳೆಗೆ 12 ವರ್ಷದ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಂದು ಆಕೆಯ ಶವ ಪತ್ತೆಯಾಗಿದೆ. ಕಿರಣ ವಿಭೂತಿ ಮೃತ ಬಾಲಕಿಯಾಗಿದ್ದಾರೆ.
ಧಾರಕಾರ ಮಳೆಯಿಂದಾಗಿ ಗ್ರಾಮದಲ್ಲಿ ಹಳ್ಳಕೊಳ್ಳಗಳು ತುಂಬಿಕೊಂಡಿದ್ದವು. ಈ ನೀರಿನಲ್ಲಿ ಬಾಲಕಿ ಕೊಚ್ಚಿ ಹೋಗಿದ್ದಳು. ಇದೀಗ ಬಾಲಕಿಯ ಶವ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಮಹಾಮಳೆಗೆ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹುಕ್ಕೇರಿ ತಾಲೂಕಿನ ಗೌಡವಾಡ, ಅರ್ಜುನವಾಡ ಗ್ರಾಮಗಳಿಗೂ ಹೀರಣ್ಯಕೇಶಿ ನದಿ ನೀರು ನುಗ್ಗಿದೆ.
ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಉಂಟಾಗಿದ್ದು, 2 ಲಕ್ಷ 40 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯ ಒಳಹರಿವು ಇದ್ದರೆ ಸಂಜೆವರೆಗೂ 3 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರಗಳಲ್ಲಿ ಪ್ರವಾಹ ನಿರ್ಮಾಣವಾಗುವ ಸಾಧ್ಯತೆಗಳಿವೆ.









