ಧಾರವಾಡ : ಪ್ರತೀ ಮಗುವೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದು, ಅದನ್ನು ಗುರುತಿಸಿ ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಬೆಳಗಲು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರು ಶ್ರಮಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ಅವರು ಇಲ್ಲಿಯ ಸರಕಾರಿ ಆರ್ಟ ಗ್ಯಾಲರಿಯಲ್ಲಿ ತಮ್ಮ ಕಚೇರಿಯ ವತಿಯಿಂದ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ ಬೆಳಗಾವಿ ವಿಭಾಗ ಮಟ್ಟದ 5 ದಿನಗಳ ಕಲಾಕೃತಿ ರಚನಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಂದಿರುವ ಚಿತ್ರಕಲೆ, ಸಾಹಿತ್ಯ, ಸಂಗೀತ, ಅಭಿನಯ ಮತ್ತು ಮಾತುಗಾರಿಕೆಯಂತಹ ವಿಭಿನ್ನ ಪ್ರತಿಭಾ ಕೌಶಲಗಳನ್ನು ಮುಕ್ತವಾಗಿ ಪ್ರೋತ್ಸಾಹಿಸಿ ಅವರ ಅಭಿವ್ಯಕ್ತಿಗೆ ವ್ಯಾಪಕ ಅವಕಾಶಗಳನ್ನು ಒದಗಿಸಬೇಕೆಂದು ಜಯಶ್ರೀ ಶಿಂತ್ರಿ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಈಶ್ವರ ನಾಯಕ, ಎಸ್.ಬಿ. ಬಿಂಗೇರಿ, ಬಸವರಾಜ ಬಡಿಗೇರ, ಸುಜಾತಾ ತಿಮ್ಮಾಪೂರ, ಪಿ.ಆರ್. ಬಾರಕೇರ, ಬಿ.ವೈ. ಭಜಂತ್ರಿ ಹಾಗೂ ಚಿತ್ರಕಲಾ ಕಾಲೇಜಿನ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಪ್ರಮಾಣ ಪತ್ರ ವಿತರಿಸಿದರು. ಡಾ. ಸಂಗಮೇಶ ಬಗಲಿ ಹಾಗೂ ಶಾರದಾ ಪಾರ್ವತಿ ಶಿಬಿರದ ಅನಿಸಿಕೆ ಹೇಳಿದರು. ಶಿಬಿರ ಸಂಘಟನೆಗೆ ಶ್ರಮಿಸಿದ ಎಸ್.ಎ. ಕೇಸರಿ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚಲವಾದಿ, ಇಸೂಫ್ಅಲಿ ಖಲಾಸಿ, ವಿಜಯಕುಮಾರ ಶಿಂಗೆ, ಮಂಜು ಗೌಡರ, ಎಂ.ಬಿ. ಹುಬ್ಬಳ್ಳಿ, ನಾರಾಯಣ ಯರಗುಪ್ಪಿ ಅವರಿಗೆ ಆಯುಕ್ತರು ನೆನಪಿನ ಕಾಣಿಕೆ ನೀಡಿದರು. ಪ್ರವೀಣ ಬಿರಾದಾರ ವಂದಿಸಿದರು.
ನೂರು ಕಲಾಕೃತಿಗಳು : ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಧಾರವಾಡ, ಉತ್ತರಕನ್ನಡ, ಹಾವೇರಿ, ಗದಗ, ಚಿಕ್ಕೋಡಿ ಮತ್ತು ಶಿರಸಿ ಜಿಲ್ಲೆಗಳ 50 ಪ್ರೌಢ ಶಾಲೆಗಳ ಚಿತ್ರಕಲಾ ಶಿಕ್ಷಕರು ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಪ್ರಧಾನ ಆಶಯದ ಅಡಿಯಲ್ಲಿ ವಿಭಿನ್ನ ಪರಿಕಲ್ಪನೆಗಳ ಸುಮಾರು ನೂರಕ್ಕೂ ಹೆಚ್ಚು ಸುಂದರವಾದ ಕಲಾಕೃತಿಗಳನ್ನು ರಚಿಸಿ ಇಲಾಖೆಗೆ ಒಪ್ಪಿಸಿದರು.