ಬೆಳಗಾವಿ: ಮಹಾರಾಷ್ಟ್ರದಲ್ಲಿ ವರುಣಾರ್ಭಟ ಮುಂದುವರೆದಿದ್ದು, ನೆರೆ ಜಿಲ್ಲೆಯಾದ ಬೆಳಗಾವಿ ಮೇಲೂ ಪರಿಣಾಮ ಬೀರಿದೆ. ಬೆಳಗಾವಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ ಧೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಚಿಕ್ಕೋಡಿ ವ್ಯಾಪ್ತಿಯ ಮತ್ತೊಂದು ಸೇತುವೆ ಜಲಾವೃತವಾಗಿದೆ. ಅಂತರರಾಜ್ಯ ಸಂಪರ್ಕ ಕಲ್ಪಿಸುವ ಕುಡಚಿ-ಉಗಾರ ಸೇತುವೆ ಜಲಾವೃತಗೊಂಡಿದೆ. ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಮುಳುಗಡೆಯಿಂದಾಗಿ ತಾತ್ಕಾಲಿಕವಾಗಿ ಸಂಚಾರ ಬಂದ್ ಮಾಡಲಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಸುರಿತ್ತಿರುವ ಮಹಾ ಮಳೆಗೆ ಉಪನದಿಗಳು ನದಿತಟದಾಟಿ ಹರಿಯುತ್ತಿವೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 8 ಸೇತುವೆಗಳು ಜಲಾವೃತವಾಗಿವೆ. ಸೇತುವೆ ಎರಡು ಕಡೆ ಪೊಲಿಸ್ ಹಾಗೂ ಜಿಲ್ಲಾಡಳಿತದಿಂದ ಬ್ಯಾರಿಕೆಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ.
ಇತ್ತ ಮಹಾರಾಷ್ಟ್ರದ ರಾಧಾನಗರಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 2 ಗೇಟ್ ಮೂಲಕ ಕೃಷ್ಣಾ ನದಿಗೆ 2700 ಕ್ಯೂಸೇಕ್ ನೀರು ಬಿಡುಗಡೆ ಮಾಡಲಾಗಿದೆ. ಕೊಲ್ಹಾಪುರ ನಗರದಾದ್ಯಂತ ಹೈ ಅಲರ್ಟ್ ಮಾಡಲಾಗಿದೆ. ಪಂಚಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೊಲ್ಹಾಪುರ ಜಿಲ್ಲೆಯೊಂದರಲ್ಲೆ ಈ ವರೆಗೆ 105 ಸೇತುವೆಗಳು ಜಲಾವೃತವಾಗಿವೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ 4 ಎನ್ ಡಿ ಆರ್ ಎಫ್ ತಂಡ ನಿಯೋಜಿಸಿದೆ.








