ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಮೌನಿ ಅಮಾವಾಸ್ಯೆಯ ವಿಶೇಷ ದಿನದಂದು ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿರುವ ಘಟನೆ ಕರುಣಾಜನಕವಾಗಿದೆ. ಈ ಅಘಾತಕಾರಿ ಘಟನೆಯಿಂದ ತಮ್ಮ ಪ್ರಿಯಜನರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ದುಃಖ ಸಂತಾಪಗಳು ಎಂದು ವಿರೋಧ ಪಕ್ಷದ ನಾಯಕ ಆರ್. ಆಶೋಕ್ ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮನವಿ:
ಮೃತದೇಹಗಳನ್ನು ಕರ್ನಾಟಕಕ್ಕೆ ತಲುಪಿಸಲು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡಿರುವವರಿಗೆ ಶೀಘ್ರ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ:
ಪ್ರಪಂಚದ ಅತ್ಯಂತ ದೊಡ್ಡ ಧಾರ್ಮಿಕ ಸಮಾರಂಭ ಎನಿಸಿಕೊಂಡಿರುವ ಕುಂಭಮೇಳವು 144 ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಲಕ್ಷಾಂತರ ಭಕ್ತರ ಪ್ರೀತಿ ಮತ್ತು ಭಕ್ತಿಯನ್ನು ಸೆಳೆಯುತ್ತದೆ. ಮೌನಿ ಅಮಾವಾಸ್ಯೆಯ ವಿಶೇಷ ದಿನವಾದ ಇಂದು 10 ಕೋಟಿಗೂ ಹೆಚ್ಚು ಜನರು ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿದರೆಂದು ಅಂದಾಜಿಸಲಾಗಿದೆ.
ಕನ್ನಡಿಗರಿಗೆ ಸಲಹೆ:
ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ಕನ್ನಡಿಗರಿಗೆ ತಮ್ಮ ಸುರಕ್ಷತೆಯ ಬಗ್ಗೆ ಕಿವಿಮಾತು ನೀಡಿದ ಆಶೋಕ್, ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆ ಮತ್ತು ಆಯೋಜಕರ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.
ಆತುರಪಡುವುದು ಅಥವಾ ಅಸಹನೆ ತೋರಿಸುವುದರಿಂದ ಹೆಚ್ಚಿನ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರ ಗುಂಪಿನ ಜೊತೆಗೇ ಇರಲು ಪ್ರಯತ್ನಿಸಿ. ಸಣ್ಣ ಮಕ್ಕಳು ಮತ್ತು ಹಿರಿಯರ ಮೇಲೆ ವಿಶೇಷ ಗಮನ ಇರಲಿ. ಅವರ ಸುರಕ್ಷತೆ ಬಗ್ಗೆ ತಾರತಮ್ಯವಿಲ್ಲದ ಕಾಳಜಿ ವಹಿಸಿ. ಯಾವುದೇ ಅಪಪ್ರಚಾರ ಅಥವಾ ಊಹಾಪೋಹಗಳಿಗೆ ಕಿವಿಗೊಡಬೇಡಿ ಅಂತ ಮನವಿ ಮಾಡಿದ್ದಾರೆ.
ಆಯೋಜಕರಿಂದ ಸೂಕ್ತ ವ್ಯವಸ್ಥೆ:
ಪ್ರತಿಯೊಬ್ಬ ಭಕ್ತನಿಗೂ ಸುಗಮವಾಗಿ ಪುಣ್ಯ ಸ್ನಾನ ಮಾಡುವ ಅವಕಾಶ ಕಲ್ಪಿಸಲು ಉತ್ತರ ಪ್ರದೇಶದ ಸರ್ಕಾರ ಮತ್ತು ಸ್ಥಳೀಯ ಆಡಳಿತವು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿವೆ. ಯಾವುದೇ ತೊಂದರೆಯಾಗದಂತೆ ಭಕ್ತರು ಸಹಕರಿಸಬೇಕು. ಭಕ್ತರು ಪವಿತ್ರ ಸ್ನಾನವನ್ನು ಶಾಂತ ಮತ್ತು ಧೈರ್ಯದಿಂದ ನೆರವೇರಿಸಿ, ಸುರಕ್ಷಿತವಾಗಿ ಹಿಂದಿರುಗಿ ಬರುವಂತೆ ವಿನಂತಿಸಿರುವ ಅವರು, ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಬುದ್ಧಿಮತ್ತೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.