ಬೆಳಗಾವಿ ಬೈ ಎಲೆಕ್ಷನ್ : ಮತಗಟ್ಟೆಗಳತ್ತ ಚುನಾವಣಾ ಸಿಬ್ಬಂದಿ
ಬೆಳಗಾವಿ : ನಾಳೆ ಬೆಳಗಾವಿ ಲೋಕಸಭಾ ಉಪಚುನಾವಣಾ ಮತದಾನ ನಡೆಯಲಿದ್ದು, ಮತಗಟ್ಟೆ ಕೇಂದ್ರಗಳತ್ತ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಮುಖ ಮಾಡಿದ್ದಾರೆ. ಮತಯಂತ್ರ, ಕೋವಿಡ್ ಕಿಟ್, ಮೆಡಿಕಲ್ ಕಿಟ್ ಜೊತೆಗೆ ಸಿಬ್ಬಂದಿ ಮತಗಟ್ಟೆಯತ್ತ ಹೊರಟ್ಟಿದ್ದಾರೆ.
ಬೆಳಗಾವಿ ವನಿತಾ ವಿದ್ಯಾಲಯದಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಯತ್ತ 300 ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಹಾಗೂ ಟೆಂಪೋ ಟ್ರಾವೆಲ್, ಟ್ರ್ಯಾಕ್ಸನಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 2566 ಮತಗಟ್ಟೆ ಕೇಂದ್ರಗಳಿದ್ದು, ಇಂದು ಸಂಜೆ ವೇಳೆಗೆ ಸಿಬ್ಬಂದಿ ಮತಗಟ್ಟೆಗಳಿಗೆ ತಲುಪಲಿದ್ದಾರೆ.
ಉಪಚುನಾವಣೆಗೆ 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸುಗಮ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು ಮತಗಟ್ಟೆಗಳ ಪೈಕಿ 587 ಅತಿಸೂಕ್ಷ್ಮ ಮತ್ತು 118 ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅನುಕಂಪದ ಮತಗಳನ್ನು ಪಡೆಯಲು ಬಿಜೆಪಿ, ಸುರೇಶ್ ಅಂಗಡಿಯವರ ಪತ್ನಿ ಎಂ.ಎಸ್.ಮಂಗಳಾ ಅಂಗಡಿಯವರನ್ನು ಕಣಕ್ಕಿಳಿಸಿದ್ದರೆ, ಹಾಲಿ ಶಾಸಕ ಮತ್ತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಒಟ್ಟು 18,13,567 ಮತದಾರರಿದ್ದಾರೆ.










