ಹುಬ್ಬಳ್ಳಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಯಾರಿಗೆ ನೀಡಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಸಚಿವ ಜಗದೀಶ್ ಶೆಟ್ಟರ್ ತಮಗೇ ಹಾಗೂ ಕುಟುಂಬಸ್ಥರಿಗೆ ವಿಧಾನಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆಂಬ ಮಾತುಗಳು ಬರುತ್ತಿದೆ (Jagadish belagavi MPseat).
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಉಪ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಈ ಬಗ್ಗೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ಇನ್ನೂ ಚರ್ಚೆಯಾಗಿಲ್ಲ ಎಂದರು.
ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಗುವುದು. ನನಗೆ ಟಿಕೆಟ್ ನೀಡಲು ಚರ್ಚೆಯಾಗಿದೆ ಎಂದು ಯಾರೂ ಹೇಳಿಲ್ಲ. (Jagadish belagavi MPseat)ಲೋಕಸಭಾ ಟಿಕೆಟ್ ನನಗೆ ಸಿಕ್ಕರೆ ನನ್ನ ಕುಟುಂಬಸ್ಥರಿಗೆ ವಿಧಾನಸಭೆ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದೇನೆ ಎಂಬ ಯಾವುದೇ ಚರ್ಚೆಯಾಗಿಲ್ಲ. ಕೇವಲ ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದಿದ್ದಾರೆ.

ದಿ. ಸುರೇಶ್ ಅಂಗಡಿ ಕುಟುಂಬ ಸದಸ್ಯರಿಗೆ ಉಪಚುನಾವಣೆಗೆ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿಗಳು ಕೇಳುತ್ತಲೇ ಬಂದಿದ್ದಾರೆ. ಜಗದೀಶ್ ಶೆಟ್ಟರ್ ಮಗನಿಗೆ ದಿ. ಸುರೇಶ್ ಅಂಗಡಿ ಪುತ್ರಿ ಕೊಟ್ಟು ವಿವಾಹ ಮಾಡಲಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಸುರೇಶ್ ಅಂಗಡಿಗೆ ಬೀಗರು. ಬೆಳಗಾವಿ ಲೋಕಸಭೆ ಉಪಚುನಾವಣೆ ಟಿಕೆಟ್ ಶೆಟ್ಟರ್ಗೆ ಹಾಗೂ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಡೆಯುವ ಉಪಚುನಾವಣೆಗೆ ತಮ್ಮ ಕುಟುಂಬಸ್ಥರಿಗೆ ನೀಡಬೇಕು ಎಂದು ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಪಚುನಾವಣೆಗೆ ಅಂಗಡಿ ಸೊಸೆಗೆ ಟಿಕೆಟ್ ಕೊಡುತ್ತಾರೋ ಅಥವಾ ಸುರೇಶ್ ಅಂಗಡಿ ಪತ್ನಿಗೆ ಬಿಜೆಪಿ ಟಿಕೆಟ್ ನೀಡುತ್ತದೆಯೋ ಗೊತ್ತಿಲ್ಲ. ಆದರೆ, ಈಗಿನಿಂದಲೇ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿರುವುದಂತೂ ನಿಜ ಎನ್ನಲಾಗಿದೆ.








