ರಾಯಚೂರು : ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆದ್ರೆ ಈ ನಿಯಮಗಳನ್ನು ಜನರಿಗೆ ತಲುಪಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕಿದ್ದ ಸರ್ಕಾರದ ಭಾಗವಾದ ಸಚಿವರೇ ನಿಯಮಗಳನ್ನು ಸಾರಸಗಟಾಗಿ ಉಲ್ಲಂಘಿಸುತ್ತಿದ್ದಾರೆ.
ಸಾಮಾಜಿಕ ಅಂತರ ಎಲ್ಲಿ ಸಾಹುಕಾರ‍್ರೇ?
ರಾಯಚೂರಿನ ಮಸ್ಕಿಯ ಬುದ್ದಿನ್ನಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಭರ್ಜರಿ ಸನ್ಮಾನ ಮಾಡಲಾಯಿತು. ಆದ್ರೆ ಕಾರ್ಯಕ್ರಮದ ವೇದಿಕೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆ ಜನ ಸಚಿವರಿಗೆ ಸನ್ಮಾನಿಸಿದ್ದಾರೆ. ವೇದಿಕೆಗೆ ಗುಂಪು ಗುಂಪಾಗಿ ಆಗಮಿಸಿ ಸನ್ಮಾನಿಸಿದ ವಿವಿಧ ಸಂಘಟನೆಯವರು ಯಾವುದೇ ಸಾಮಾಜಿಕ ಅಂತರ ಕಾಪಾಡಲಿಲ್ಲ. ಸಚಿವರ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದಿದ್ದರು.
ಇನ್ನೂ ಕೆಬಿಜೆಎನ್ ಎಲ್ ನಿಂದ ಆಯೋಜಿಸಿರುವ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮವಾಗಿ ಬದಲಾಗಿತ್ತು. ಕಾರ್ಯಕ್ರಮದಲ್ಲಿ ಬಹುತೇಕ ಬಿಜೆಪಿ ಮುಖಂಡರೆ ಭಾಗವಹಿಸಿದ್ದು ಪ್ರೊಟೊಕಾಲ್ ಉಲ್ಲಂಘನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಶಿವರಾಜ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.








