Bellary ಪೌರಕಾರ್ಮಿಕರ ಮೇಲೆ ಹಲ್ಲೆ.. ಕೆಲಸ ಸ್ಥಗಿತ
ಬಳ್ಳಾರಿ : ಹನುಮಾನ್ ನಗರದಲ್ಲಿ ಹೊರ ಚರಂಡಿಯನ್ನು ಸ್ವಚಗೊಳಿಸಲು ತೆರಳಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ವಿರುಪಾಕ್ಷಿ ಮತ್ತು ಇತರರು ಸೇರಿದಂತೆ 7 ಜನರ ವಿರುದ್ಧ ಹಲ್ಲೆ, ಜಾತಿ ನಿಂದನೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಪಾಲಿಕೆಯ ಪೌರ ಕಾರ್ಮಿಕರಾದ ನಾರಾಯಣಮ್ಮ, ಮಂಗಮ್ಮ, ದುರುಗಮ್ಮ, ಆನಂದ್, ಗಂಗಣ್ಣ, ಮಾರೆಕ್ಕ, ಶ್ರೀನಿವಾಸ್ ಹಲ್ಲೆಗೊಳಗಾದವರು.

ಇವರು ಬುಧವಾರ ಬೆಳಿಗ್ಗೆ ಮಳೆ ನೀರು ರಸ್ತೆಯ ಮೇಲೆ ಸಂಗ್ರಹ ಆಗಿದ್ದರಿಂದ ಆ ನೀರಿಗೆ ದಾರಿ ಕಲ್ಪಿಸಿ, ಸರಾಗವಾಗಿ ತೆರಳುವಂತೆ ಮಾಡಲು ಹೊರ ಚರಂಡಿ (ಮೋರಿ)ಯ ಕಲ್ಲುಗಳನ್ನು ತೆಗೆಯಲು ಮುಂದಾದಾಗ ಅಲ್ಲಿನ ನಿವಾಸಿ ವಿರುಪಣ್ಣ ಹಾಗೂ ಅವರ ಕುಟುಂಬದ ಆರು ಜನ ಸದಸ್ಯರು ಪಾಲಿಕೆಯ ಪೌರ ಕಾರ್ಮಿಕರನ್ನು ಜಾತಿ ಹಿಡಿದು ನಿಂದಿಸಿದ್ದಾರೆ. ಅಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಬ್ರೂಸ್‍ಪೇಟೆ ಠಾಣೆಗೆ ತೆರಳಿದ ಹಲ್ಲೆಗೀಡಾದ ಪೌರ ಕಾರ್ಮಿಕರು ಹಲವು ಸೆಕ್ಷನ್‍ಗಳಡಿ ದೂರು ದಾಖಲಿಸಿದ್ದಾರೆ.








