ಶತಕ ದಾಖಲಿಸಿ ಶ್ರೇಷ್ಠ ಆಲ್‍ರೌಂಡರ್ ಗಳ ಸಾಲಿಗೆ ಸೇರಿಕೊಂಡ ಬೆನ್ ಸ್ಟೋಕ್ಸ್…!
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೆಸರು ವಿಶ್ವ ಕ್ರಿಕೆಟ್ ಪುಸ್ತಕದಲ್ಲಿ ದಾಖಲೆಯಾಗಿದೆ. ತಾಳ್ಮೆಯ ಜೊತೆಗೆ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಬೆನ್ ಸ್ಟೋಕ್ಸ್ ಆಕರ್ಷಕ ಶತಕ ಸಿಡಿಸಿದ್ದಾರೆ. ಅಲ್ಲದೆ ಬೆನ್ ಸ್ಟೋಕ್ಸ್ ಅವರ ಈ ಶತಕದ ಮೂಲಕ ತನ್ನ ಶತಕಗಳ ಸಂಖ್ಯೆಯನ್ನು ಹತ್ತಕ್ಕೇರಿಸಿಕೊಂಡಿದ್ದಾರೆ.
ಈ ಮೂಲಕ ಬೆನ್ ಸ್ಟೋಕ್ಸ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 150 ವಿಕೆಟ್ ಮತ್ತು 10 ಶತಕ ಸಿಡಿಸಿದ್ದ ಐದನೇ ಆಲ್‍ರೌಂಡರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಕ್ ಕಾಲಿಸ್ ((45 ಶತಕ – 292 ವಿಕೆಟ್) , ವೆಸ್ಟ್ ಇಂಡೀಸ್‍ನ
ಗ್ಯಾರಿ ಸೋಬರ್ಸ್ (26 ಶತಕ – 235 ವಿಕೆಟ್) , ಇಂಗ್ಲೆಂಡ್‍ನ ಇಯಾನ್ ಬಾಥಮ್ (14 ಶತಕ – 383 ವಿಕೆಟ್) ಮತ್ತು ಭಾರತದ ರವಿಶಾಸ್ತ್ರಿ (11 ಶತಕ- 151 ವಿಕೆಟ್) ಈ ಸಾಧನೆ ಮಾಡಿದ್ದರು. ಇದೀಗ ಈ ಸಾಲಿಗೆ ಬೆನ್ ಸ್ಟೋಕ್ಸ್ ಅವರು ಹೊಸ ಸೇರ್ಪಡೆಯಾಗಿದೆ.
ವೆಸ್ಟ್ ಇಂಡೀಸ್ ಬೌಲರ್‍ಗಳನ್ನು ಮನಬಂದಂತೆ ಕಾಡಿದ್ದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ್ರು. ಶತಕದ ನಂತರವೂ ತನ್ನ ಅಮೋಘ ಬ್ಯಾಟಿಂಗ್ ಮುಂದುವರಿಸಿದ ಬೆನ್ ಸ್ಟೋಕ್ಸ್ ಮನಮೋಹಕ 176 ರನ್ ದಾಖಲಿಸಿದ್ದರು. ಬೆನ್ ಸ್ಟೋಕ್ಸ್ ಇನಿಂಗ್ಸ್ ನಲ್ಲಿ 17 ಬೌಂಡರಿ ಮತ್ತು ಎರಡು ಅದ್ಭುತ ಸಿಕ್ಸರ್‍ಗಳಿದ್ದವು.
ಇನ್ನೊಂದೆಡೆ ಡಾಮಿನಿಕ್ ಕೂಡ ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಅಲ್ಲದೆ ನಾಲ್ಕನೇ ವಿಕೆಟ್‍ಗೆ ಬೆನ್ ಸ್ಟೋಕ್ಸ್ ಜೊತೆ ಸೇರಿ 260 ರನ್ ಕೂಡ ಪೇರಿಸಿದ್ದರು. ಇಂಗ್ಲೆಂಡ್ 9 ವಿಕೆಟ್‍ಗೆ 469 ರನ್‍ಗೆ ತನ್ನ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿದೆ.








