ಅನಿರ್ದಿಷ್ಟಾವಧಿವರೆಗೆ ವಿಶ್ರಾಂತಿ : ಕ್ರಿಕೆಟ್ ಗೆ ಬೆನ್ ಸ್ಟೋಕ್ಸ್ ಗುಡ್ ಬೈ..?
ಲಂಡನ್ : ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿವರೆಗೆ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಕಾರಣದಿಂದಾಗಿ ಅವರು ಟೀಂ ಇಂಡಿಯಾ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಬೆನ್ ಸ್ಟೋಕ್ಸ್..! ಇಂಗ್ಲೆಂಡ್ ತಂಡದ ಬೆನ್ನೆಲುಬು. ತಂಡ ಎಂತಹದ್ದೇ ಪರಿಸ್ಥಿತಿಯಲ್ಲಿದ್ದರೂ ತಂಡಕ್ಕಾಗಿ ಛಲದಂಕಮಲ್ಲನಂತೆ ಹೋರಾಡಿ ಪಂದ್ಯವನ್ನು ಗೆಲ್ಲಿಸಿಕೊಡುವ ತಾಕತ್ತಿರುವ ಆಟಗಾರ. ಸಿಡಿಲಬ್ಬರದ ಬ್ಯಾಟಿಂಗ್, ಬೌಲಿಂಗ್ ಮಾಡುವ ಸ್ಟೋಕ್ಸ್ ಮೈದಾನದಲ್ಲಿ ಚಿರತೆಯಂತೆ ಫೀಲ್ಡೀಂಗ್ ಮಾಡುತ್ತಾರೆ. ಅದೆಷ್ಟೋ ಮ್ಯಾಚ್ ಗಳನ್ನು ತಮ್ಮ ಅಬ್ಬರದ ಬ್ಯಾಟಿಂಗ್ ನಿಂದ ಗೆಲ್ಲಿಸಿಕೊಟ್ಟಿರುವ ಸ್ಟೋಕ್ಸ್ ಇದೀಗ ಅನಿರ್ದಿಷ್ಟಾವಧಿ ವಿಶ್ರಾಂತಿ ಕೋರಿರುವುದಾಗಿ ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಅಲ್ಲದೆ ಸ್ಟೋಕ್ಸ್ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಶಾಕ್ ನೀಡಿದ್ದು, ಸ್ಟೋಕ್ಸ್ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಾ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.
ಅಂದಹಾಗೆ ಬೆನ್ ಸ್ಟೋಕ್ಸ್ ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಇದೀಗ ವಿಶ್ರಾಂತಿ ಪಡೆಯಲು ದಿಢೀರ್ ನಿರ್ಧಾರ ಮಾಡಿದ್ದು, ತಕ್ಷಣದಿಂದಲೇ ಜಾರಿಗೊಳ್ಳುವಂತೆ ನಿರ್ಧಾರ ಕೈಗೊಂಡಿದ್ದಾಗಿ ಇಸಿಬಿ ತಿಳಿಸಿದೆ.
ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗಾಯಗೊಂಡಿದ್ದ ಸ್ಟೋಕ್ಸ್ ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದರು.ಬಳಿಕ ಕಂಬ್ಯಾಕ್ ಮಾಡಿ ಪಾಕ್ ವಿರುದ್ಧದ ಏಕದಿನ ಸರಣಿಗೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು ಸರಣಿ ಗೆದ್ದು ಬೀಗಿದ್ದರು. ಇದಾದ ಬಳಿಕ ಟಿ-20 ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದರು.
ಇದೀಗ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರು ದೂರ ಉಳಿಯಲಿದ್ದಾರೆ. ಅಲ್ಲದೆ ಬೆನ್ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಇಸಿಬಿ ತಿಳಿಸಿದೆ.