ಹೊಸದಿಲ್ಲಿ, ಮೇ 20 : ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯಡಿ ಲಾಭ ಪಡೆದವರ ಸಂಖ್ಯೆ ಒಂದು ಕೋಟಿ ದಾಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. “ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ 1 ಕೋಟಿಯನ್ನು ದಾಟಿದೆ ಎನ್ನುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತರುವ ವಿಷಯ” ಎಂದು ಅವರು ಟ್ವೀಟ್ ಮಾಡಿದ್ದು, ಈ ಯೋಜನೆಯು ಅನೇಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಬರೆದಿದ್ದಾರೆ.
ಸರಣಿ ಟ್ವೀಟ್ ಗಳನ್ನು ಮಾಡಿರುವ ಪ್ರಧಾನಿ ಮೋದಿ 1 ಕೋಟಿ ಫಲಾನುಭವಿಗಳಲ್ಲಿ ಒಬ್ಬರಾದ ಮೇಘಾಲಯದ ಸೇನಾ ಸಿಬ್ಬಂದಿಯ ಪತ್ನಿಯಾಗಿರುವ ಪೂಜಾ ಥಾಪಾ ಅವರೊಂದಿಗೆ ನಾನು ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡಿದ್ದು, ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿಸಿದ್ದಾರೆ ಮತ್ತು ಆಯುಷ್ಮಾನ್ ಭಾರತ್ ಜೊತೆ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಸೇವೆ ಕಾರ್ಯಕರ್ತರನ್ನು ಕಾರ್ಯಕರ್ತರನ್ನು ಶ್ಲಾಘಿಸಿದ್ದಾರೆ. ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.ಅವರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.
ಈ ಯೋಜನೆಯ ಅತಿದೊಡ್ಡ ಪ್ರಯೋಜನವೆಂದರೆ “ಪೋರ್ಟಬಿಲಿಟಿ”, ಏಕೆಂದರೆ ಫಲಾನುಭವಿಗಳು ನೋಂದಾಯಿತ ಸ್ಥಳಗಳಲ್ಲಿ ಮಾತ್ರವಲ್ಲದೆ ಭಾರತದ ಇತರ ಭಾಗಗಳಲ್ಲಿಯೂ ಉತ್ತಮ ಗುಣಮಟ್ಟದ ಮತ್ತು ಒಳ್ಳೆ ವೈದ್ಯಕೀಯ ಆರೈಕೆಯನ್ನು ಪಡೆಯಬಹುದು. ಮನೆಯಿಂದ ದೂರವಿದ್ದು ಕೆಲಸ ಮಾಡುವವರಿಗೆ ಅಥವಾ ನಾವು ನೆಲೆಸದಿರುವ ಜಾಗದಲ್ಲಿ ದಾಖಲಾತಿ ಮಾಡಿಕೊಂಡವರಿಗೆ ಇದು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮಂತ್ರಿ ಜನ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಯನ್ನು 2018ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾಗಿದ್ದು, ಜಗತ್ತಿನಲ್ಲಿಯೇ ಸರ್ಕಾರದ ಅತಿದೊಡ್ಡ ಆರೋಗ್ಯ ಸೇವೆ ಯೋಜನೆ ಎಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ತಮ್ಮ ಅಧಿಕೃತ ಪ್ರವಾಸದ ವೇಳೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳ ಜೊತೆ ಸಂವಹನ ನಡೆಸುತ್ತೇನೆ ಎಂದು ತಿಳಿಸಿದ ಪ್ರಧಾನಿ ಮೋದಿ, ದುಃಖಕರವೆಂದರೆ ಈ ಬಾರಿ ಕೊರೋನಾ ವೈರಸ್ ನಿಂದಾಗಿ ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ಸೇನಾ ಸಿಬ್ಬಂದಿಯ ಪತ್ನಿ ಪೂಜಾ ತಾಪಾ ಅವರೊಂದಿಗೆ ನಡೆಸಿರುವ ಸಂವಾದದ ವಿಡಿಯೊವನ್ನು ಕೂಡ ಪ್ರಧಾನಿ ಹಂಚಿಕೊಂಡಿದ್ದಾರೆ.
ಮೇಘಾಲಯದಲ್ಲಿ ನೆಲೆಸಿರುವ ಪೂಜಾ ತಾಪ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟೆಲಿಫೋನಿಕ್ ಸಂಭಾಷಣೆ ನಡೆಸಿ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಶಿಲ್ಲಾಂಗ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಆಯುಷ್ಮಾನ್ ಭಾರತ್ ಯೋಜನೆ ಅವರಿಗೆ ಹೇಗೆ ಸಹಾಯ ಮಾಡಿತು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಸ್ತ್ರಚಿಕಿತ್ಸೆ, ಔಷಧಿ ಇತ್ಯಾದಿ ಯಾವುದಕ್ಕೂ ಹಣ ಪಾವತಿಸಿಲ್ಲ. ಸಾಲವನ್ನೂ ಕೂಡ ಮಾಡಿಲ್ಲ. ಆಯುಷ್ಮಾನ್ ಭಾರತ್ ಯೋಜನೆ ಉತ್ತಮವಾಗಿದೆ ಎಂದು ಪೂಜಾ ತಾಪ ಹೇಳಿ ಕೊಂಡಿದ್ದಾರೆ.
2018ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮಂತ್ರಿ ಜನ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ್ ಯೋಜನೆಯನ್ನು ಆರಂಭಿಸಲಾಯಿತು. ಜಗತ್ತಿನಲ್ಲಿಯೇ ಸರ್ಕಾರದ ಅತಿದೊಡ್ಡ ಆರೋಗ್ಯ ಸೇವೆ ಯೋಜನೆ ಎಂದು ಇದನ್ನು ಬಣ್ಣಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ (ಪಿಎಂಜೆಎವೈ) ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ 2018 ರಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆಯಡಿಯಲ್ಲಿ ರಾಜ್ಯದ ಬಿಪಿಎಲ್ ಕುಟುಂಬಗಳ ಪೈಕಿ ಅರ್.ಎಸ್.ಬಿ.ವೈ ನೋಂದಾಯಿತ ಕುಟುಂಬಗಳಿಗೆ ಮಾತ್ರ ಕೇಂದ್ರ ಸರ್ಕಾರವು ಶೇ.60 ರಷ್ಟು ಅನುದಾನ ಭರಿಸುತ್ತದೆ. ರಾಜ್ಯ ಸರ್ಕಾರವು ಶೇ.40 ರಷ್ಟು ಅನುದಾನ ಭರಿಸುತ್ತದೆ. ಇನ್ನುಳಿದ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಶೇ.100 ರಷ್ಟು ವೆಚ್ಚ ಭರಿಸುತ್ತದೆ.
-ಶ್ವೇತಾರಾಜ್ ಪುತ್ತೂರು








