ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – ಬೆಂಗಳೂರಿನಲ್ಲಿ 999 ಹೆಡ್ ಕಾನ್ ಸ್ಟೇಬಲ್ ಗಳ ವರ್ಗಾವಣೆ
ಬೆಂಗಳೂರು: ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬರೋಬ್ಬರಿ 999 ಹೆಡ್ ಕಾನ್ಸ್ಟೇಬಲ್ ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಬೆಂಗಳೂರು ಆಡಳಿತ ವಿಭಾಗದ ಡಿಸಿಪಿಯಾಗಿರುವ ನಿಶಾ ಜೇಮ್ಸ್ ವರ್ಗಾವಣೆಗೊಳಿಸಿ ಆದೇಶ ನೀಡಿದ್ದಾರೆ. ನಗರದ ಸಾಕಷ್ಟು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಗೊತ್ತಿದ್ರು ಕೂಡ, ಆಮಿಷಗಳಿಗೆ ಒಳಗಾಗಿ ನೋಡಿ ನೋಡದಂತೆ ಸಿಬ್ಬಂದಿ ವರ್ತಿಸಿರೋದು, ಅಪರಾಧ ಚಟುವಟಿಕೆಗಳನ್ನು ತಡೆಯದೇ ಇರೋದರ ಬಗ್ಗೆ ಕೆಲ ದಿನಗಳ ಹಿಂದೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಗಮನಹರಿಸಿದ್ದರು.
ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳು ಮಾತ್ರವಲ್ಲದೇ ಕ್ರೈಂ ಸಿಬ್ಬಂದಿ, ಸಬ್ ಇನ್ಸ್ ಪೆಕ್ಟರ್ ಗಳು ಕೂಡ ಕೆಲ ವರ್ಷಗಳಿಂದ ಗ್ರಾಮೀಣ ಭಾಗಕ್ಕೆ ಹೋಗದೇ, ನಗರದಲ್ಲೇ ಕೆಲಸ ಮಾಡುತ್ತಿರುವ ಬಗ್ಗೆ ಕೂಡ ಮಾಹಿತಿ ಕಲೆಹಾಕಿದ್ದಾರೆ. ಹಂತ ಹಂತವಾಗಿ ಪೊಲೀಸ್ ಇಲಾಖೆಯ ಎಲ್ಲಾ ವರ್ಗಗಳಿಗೂ ವರ್ಗಾವಣೆ ಸೇರಿದಂತೆ ಕೆಲ ನಿಯಮಗಳನ್ನು ಜಾರಿಗೆ ತರಲು ಇಲಾಖೆಯ ಹಿರಿಯ ಅಧಿಕಾರಿಗಳು ಚಿಂತಿಸಿದ್ದಾರೆ. ಅದರ ಮೊದಲ ಭಾಗವಾಗಿ ಹೆಡ್ ಕಾನ್ಸ್ಟೇಬಲ್ ಗಳ ವರ್ಗಾವಣೆಗೊಳಿಸಲಾಗಿದೆ ಎನ್ನಲಾಗಿದೆ.