Bengaluru Film Festival – 13ನೇ ಚಲನಚಿತ್ರೋತ್ಸವವನ್ನ ಉದ್ಘಾಟಿಸಿದ ಸಿ ಎಂ ಬಸವರಾಜ್ ಬೊಮ್ಮಾಯಿ…
ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಸಚಿವ ಮುನಿರತ್ನ, ನಟ ದರ್ಶನ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ , ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ಕೆ. ಜಯರಾಜ್, ಮತ್ತಿತರರು ಉಪಸ್ಥಿತರಿದ್ದರು.
1934ರ ಮಾರ್ಚ್ 3ರಂದು ಪ್ರಥಮ ಕನ್ನಡ ವಾಕಿ ಚಿತ್ರ ಸತಿ ಸುಲೋಚನಾ ಬಿಡುಗಡೆಯಾಗಿತ್ತು ಇದರ ನೆನಪಿಗಾಗಿ ಮಾರ್ಚ್ ಮೂರನ್ನು ಅಂತಾರಾಷ್ಟ್ರೀಯ ಕನ್ನಡ ಸಿನಿಮಾ ದಿನ ಎಂದು ಘೋಷಣೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಚಿತ್ರರಂಗದ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆಯ ಜೊತೆಗೆ ಪರಿಶ್ರಮವು ಅಗತ್ಯ. ಕುಟುಂಬ ಸದಸ್ಯರು ಒಟ್ಟಾಗಿ ಕುಳಿತು ನೋಡುವ ಚಲನಚಿತ್ರ ನಿರ್ಮಾಣವಾಗಬೇಕು. ನೆರೆ ರಾಜ್ಯಗಳ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡುವ ಉತ್ತಮ ಚಿತ್ರಗಳನ್ನು ಮೂಡಿಬರಬೇಕು ಎಂದು ಕರೆ ನೀಡಿದರು.
ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣಕ್ಕೆ ಕಳೆದ ಬಜೆಟ್ ನಲ್ಲೇ ಘೋಷಣೆ ಮಾಡಲಾಗಿದೆ. ಈ ವರ್ಷ ಆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಮಾರ್ಚ್ 3 ರಿಂದ 10 ರವರೆಗೆ ಚಿತ್ರೋತ್ಸವ ನಡೆಯಲಿದ್ದು, ಈ ಬಾರಿ 55 ರಾಷ್ಟ್ರಗಳ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಓರಿಯಾನ್ ಮಾಲ್ ನ 11 ಪಿ ವಿ ಆರ್ ಸ್ಕ್ರೀನ್ ಗಳನ್ನ ಇದಕ್ಕಾಗಿ ಮೀಸಲಿಡಲಾಗಿದೆ. ಅಲ್ಲದೆ, ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.